ತರಬೇತಿಯಿಂದ ಪ್ರತಿಭೆ ಹೊರ ಬರಲು ಸಾಧ್ಯ

ತರಬೇತಿಯಿಂದ ಪ್ರತಿಭೆ ಹೊರ ಬರಲು ಸಾಧ್ಯ
Published on

ಪಿರಿಯಾಪಟ್ಟಣ: ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುವ ಕೆಲಸವಾಗಬೇಕಿದೆ ಎಂದು ನಿವೃತ್ತ ಉಪನ್ಯಾಸಕ ಆರ್.ಎಸ್.ದೊಡ್ಡಣ್ಣ ಹೇಳಿದರು.

ತಾಲೂಕಿನ ರಾವಂದೂರು ಗ್ರಾಮದ ಬಸವೇಶ್ವರ ಕ್ರೀಡಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ 17ನೇ ವರ್ಷದ ವಿಷ್ಣು ಗೋಲ್ಡನ್ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗೆ ಉತ್ತಮ ಕ್ರೀಡಾ ತರಬೇತಿ ದೊರೆತಲ್ಲಿ ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮುವ ಸಾಧ್ಯತೆ ಇದೆ ಎಂದರು.

ಗ್ರಾಮಾಂತರ ಯುವಕರನ್ನು ಪ್ರೋತ್ಸಾಹಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿದ್ದು, ಯುವಕರಲ್ಲಿ ಕ್ರೀಡೆಯ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸಲು ಪ್ರೇರೇಪಣೆ ಯಾಗಲಿದೆ ಎಂದರು.

ಸರ್ಕಾರವು ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ ಕ್ರೀಡಾ ಅಕಾಡೆಮಿಗಳನ್ನು ಸ್ಥಾಪಿಸಿ ಗ್ರಾಮಾಂತರ ವಿಭಾಗದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳ ತರಬೇತಿಯನ್ನು ನೀಡಿದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಬೆಳೆಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮುಖಂಡ ಆರ್.ಎಸ್.ಮಹೇಶ್ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಕ್ರೀಡಾಪಟುಗಳು ಪರಿಶ್ರಮದಿಂದ ನಿರಂತರವಾಗಿ ಅಭ್ಯಾಸ ಮಾಡಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು. ಪ್ರತಿ ಕ್ರೀಡೆಯಲ್ಲಿಯೂ ಸೋಲು-ಗೆಲುವು ನಿಶ್ಚಿತವಾಗಿದ್ದು, ಸೋಲಿಗೆ ಕುಗ್ಗದೆ ನಿರಂತರವಾಗಿ ಪರಿಶ್ರಮಪಟ್ಟಲ್ಲಿ ಗೆಲುವು ನಿಮ್ಮದಾಗಲಿದೆ, ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಹೊಂದಬೇಕಿದೆ ಎಂದರು.

ಮಾಜಿ ಸೈನಿಕ ಶಿವು ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಸಕ್ತಿ ಹೊಂದಿರುವ ಯುವಕರಿಗೆ ಮತ್ತಷ್ಟು ಪ್ರೋತ್ಸಾಹವನ್ನು ನೀಡಬೇಕು ಎಂದರು.

ವಿಷ್ಣು ಗೋಲ್ಡನ್ ಕಪ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಯಂಗ್ ಇಂಡಿಯಾ ಯುವಕರ ತಂಡ ಪ್ರಥಮ ಸ್ಥಾನ ಪಡೆದು 30 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆದುಕೊಂಡರೆ, ಬೆಟ್ಟದಪುರ ಯುವಕರ ತಂಡ ದ್ವಿತೀಯ ಬಹುಮಾನ 20 ಸಾವಿರ ನಗದು ಹಾಗೂ ಟ್ರೋಫಿ ಮತ್ತು ಸಾಲಿಗ್ರಾಮ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ಪಿಡಿಒ ಮಲ್ಲೇಶ್, ಕಾರ್ಯದರ್ಶಿ ಬಸವರಾಜು, ಸದಸ್ಯ ಶ್ರೀಕಂಠರಾಧ್ಯ, ಮುಖಂಡ ಆರ್.ಎಸ್.ವಿಜಯಕುಮಾರ್, ಶಂಕರ್, ನಂದೀಶ್, ಅಂಬಿ, ವಾಸು, ಮಹೇಶ್, ಅನುಷ್ ಪಟೇಲ್, ಶ್ರೀನಿವಾಸ್, ರವಿ, ದೀಕ್ಷಿತ್, ಬಸವೇಶ್ವರ ಕ್ರೀಡಾ ಸಂಸ್ಥೆಯ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net