ಏಕಾಏಕಿ ಕಾಮಗಾರಿ ಟ್ರಾಫಿಕ್ ಕಿರಿಕಿರಿ

Road
Published on

ಪಂಕಜ ಕೆ.ಎಂ. ಬೆಂಗಳೂರು

ರಾಜಧಾನಿಯಲ್ಲಿ ಏಕಾಏಕಿ ಕೈಗೊಂಡಿರುವ ಕಾಮಗಾರಿಗಳಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ಥವ್ಯಸ್ತಗೊಂಡಿದ್ದು, ವಾಹನಸವಾರರು ಪರದಾಡುವಂತಾಗಿದೆ. ಚಾಮರಾಜಪೇಟೆ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರಗಳಿಗೆ ಹೊಂದಿಕೊಂಡಿರುವ ಮಾಗಡಿ ರಸ್ತೆಯ ಬಾಳೇಕಾಯಿ ಮಂಡಿ ಬಳಿ ರಾಜಾಕಾಲುವೆ ದುರಸ್ತಿ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಹೊಸಹಳ್ಳಿ ರೈಲ್ವೆ ಸೇತುವೆ ಮರು ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ.

ಹೀಗೆ ಎರಡೂ ಬೃಹತ್ ಕಾಮಗಾರಿ ಪರಿಣಾಮ ಕಳೆದ ಒಂದು ವಾರದಿಂದ ಮಾರುಕಟ್ಟೆ, ಮೈಸೂರು ರಸ್ತೆ ಸಂಪರ್ಕ ಕಲ್ಪಿಸಲು ಮಾರ್ಗ ಬದಲಿಸಲಾಗಿದೆ. ಇದರ ಪರಿಣಾಮ ಮೆಜೆಸ್ಟಿಕ್ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರದಟ್ಟಣೆ ಮಿತಿಮೀರಿದೆ.

ಮಾಗಡಿ ರಸ್ತೆ ಮಾರ್ಗವಾಗಿ ಕೆ.ಆರ್. ಮಾರುಕಟ್ಟೆಗೆ ತೆರಳಲು ಈ ಹಿಂದೆ 10 ನಿಮಿಷ ತೆಗೆದುಕೊಳ್ಳುತ್ತಿತ್ತು. ಪ್ರಸ್ತುತ ಕಾಮಗಾರಿಯಿಂದಾಗಿ ಮಾರುಕಟ್ಟೆಗೆ ತಲುಪಲು ಒಂದು ಗಂಟೆಗೂ ಹೆಚ್ಚು ಸಮಯ ಆಗುತ್ತಿದೆ. ಇನ್ನು ಇದೇ ಮಾರ್ಗದಲ್ಲಿ ಮೈಸೂರು ರಸ್ತೆಯ ಸೆಟಲೈಟ್ ಬಸ್ ನಿಲ್ದಾಣ, ಕೆಂಗೇರಿ, ವಿಜಯನಗರ ಕಡೆಗೆ ಸಂಚರಿಸುತ್ತಿದ್ದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿರುವುದರಿಂದ ಸುಜಾತ ರಸ್ತೆ, ಮೆಜೆಸ್ಟಿಕ್, ಕಾಟನ್‌ಪೇಟೆ, ಗೂಡ್ಸ್‌ಶೆಡ್ ರಸ್ತೆ ಮುಂಜಾನೆಯಿಂದ ತಡರಾತ್ರಿವರೆಗೂ ವಾಹನದಟ್ಟಣೆ ಹೆಚ್ಚಿದೆ. ಇದರಿಂದ ಪಾದಚಾರಿ ಮಾರ್ಗದಲ್ಲೂ ನಡೆಯಲಾಗದೆ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೌಕರರು- ವಿದ್ಯಾರ್ಥಿಗಳ ಪರದಾಟ:

ಈ ಮಾರ್ಗದಲ್ಲಿ ಶಾಲೆ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ಹೋಗುವ ನೌಕರರಿಗೆ ಸಂಚಾರದಟ್ಟಣೆಯಿಂದ ಸಮಯ ಪಾಲನೆ ಮಾಡಲಾಗುತ್ತಿಲ್ಲ. ಆಟೋ ಹಾಗೂ ಸರಕುಸಾಗಣೆ ವಾಹನಗಳ ಚಾಲಕರು ಕೂಡ ನಿತ್ಯದ ಕೆಲಸದ ಮೇಲೂ ತೀವ್ರ ಪರಿಣಾಮ ಬೀರಿದೆ. ಇದಲ್ಲದೆ ಕಾಮಗಾರಿ ನಡೆಯುತ್ತಿರುವ ಸುತ್ತಮುತ್ತಲ ಒಳರಸ್ತೆಗಳೂ ಸಂಪೂರ್ಣ ಹದಗೆಟ್ಟಿರುವುದರಿಂದ ಮುಖ್ಯರಸ್ತೆಯನ್ನು ಅವಲಂಬಿಸಿದ್ದವರೂ ಅನಗತ್ಯ ತೊಂದರೆಗೆ ಸಿಲುಕಿ ಪರದಾಡುವಂತಾಗಿದೆ.

ಕಾಮಗಾರಿ ವಿಳಂಬ:

ಬಾಳೇಕಾಯಿ ಮಂಡಿ ಬಳಿ ಕೈಗೊಂಡಿರುವ ರಾಜಾಕಾಲುವೆ ದುರಸ್ತಿ ಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಇಲ್ಲ. ಅಲ್ಲದೆ ಮಳೆಗಾಲದಲ್ಲಿ ಕಾಮಗಾರಿ ಕೈಗೊಂಡಿರುವುದರಿಂದ ನಿಗದಿತ ಸಮಯಕ್ಕೆ ಮುಗಿಸುವುದು ಸುಲಭವಲ್ಲ. ಹಾಗಾಗಿ ಕಾಮಗಾರಿ ಇನ್ನಷ್ಟು ವಿಳಂಬ ಆಗುವ ಸಾಧ್ಯತೆಗಳಿದ್ದು, ಜನರು ಇನ್ನೂ ಒಂದೆರಡು ತಿಂಗಳು ಟ್ರಾಫಿಕ್ ನಡುವೆಯೇ ದಿನ ದೂಡಬೇಕಿದೆ.

ಆಂಬುಲೆನ್ಸ್ ವಾಹನಕ್ಕಿಲ್ಲ ಸುಗಮ ದಾರಿ:

ಕೆ.ಆರ್. ಮಾರುಕಟ್ಟೆಯಲ್ಲಿರುವ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಡಿಯಲ್ಲಿ ಬರುವ ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ನೆ್ರೆೆ ಯುರಾಲಜಿ ಸಂಸ್ಥೆಯಂತಹ ಪ್ರಮುಖ ಆಸ್ಪತ್ರೆಗಳಿವೆ. ಇಲ್ಲಿಗೆ ಸುಲಭವಾಗಿ ಹೋಗಿಬರಲು ಇದ್ದ ರಸ್ತೆ ಇದೊಂದೇ. ಈ ಮಾರ್ಗದಲ್ಲಿ ನಿತ್ಯ 40ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಸಂಚರಿಸುತ್ತಿದ್ದವು. ಈಗ ರಸ್ತೆ ಸಂಪೂರ್ಣ ಬಂದ್ ಆಗಿರುವುದರಿಂದ ತುರ್ತು ಸಂದರ್ಭದಲ್ಲಿ ಯಾವ ಕಡೆ ಹೋಗಬೇಕೆಂದು ತಿಳಿಯದೆ ಬಿನ್ನಿಮಿಲ್, ಕಾಟನ್‌ಪೇಟೆ ಸುತ್ತಮುತ್ತಲ ರಸ್ತೆಗಳಲ್ಲೇ ಗಿರಕಿ ಹೊಡೆಯುವಂತಾಗಿದೆ. ಆಂಬುಲೆನ್ಸ್‌ಗಳಲ್ಲಿ ರೋಗಿಗಳ ನರಳಾಟ ಹೇಳತೀರದಾಗಿದೆ.

ಕೆಲಸಕ್ಕಾಗಿ ಕಾಟನ್‌ಪೇಟೆಯಿಂದ ನಿತ್ಯ ರಾಜಾಜಿನಗರಕ್ಕೆ ಹೋಗಬೇಕು. ಈ ಮೊದಲು 10-15 ನಿಮಿಷದಲ್ಲಿ ಕೆಲಸದ ಸ್ಥಳ ತಲುಪುತ್ತಿದ್ದೆ. ಕಳೆದೊಂದು ವಾರದಿಂದ ಒಂದು ಗಂಟೆ ಸಮಯ ಆಗುತ್ತಿದೆ. ಮನೆಯ ಬಳಿಯೂ ವಾಹನ ದಟ್ಟಣೆಯಿಂದ ಕಿರಿಕಿರಿ ಆಗುತ್ತಿದೆ. -ಶಂಕರ್, ಕಾಟನ್‌ಪೇಟೆ ನಿವಾಸಿ
ನನ್ನದು ಸರಕುಸಾಗಣೆ ವಾಹನವಿದ್ದು, ಇದೇ ಮಾರ್ಗದಲ್ಲಿ ಈ ಹಿಂದೆ ನಿತ್ಯ 7-8 ಟ್ರಿಪ್ ಮಾಡುತ್ತಿದ್ದೆ. ಈಗ ದಿನಕ್ಕೆ ಮೂರು ಟ್ರಿಪ್ ಮಾಡುವುದು ಕಷ್ಟವಾಗಿದೆ. 10 ನಿಮಿಷದಲ್ಲಿ ತಲುಪುತ್ತಿದ್ದ ಸ್ಥಳಗಳಿಗೆ ಒಂದೂವರೆ ಗಂಟೆ ಆಗುತ್ತಿದೆ. ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಕಲ್ಪಿಸಬೇಕು. -ರಾಜೇಶ್, ಚಾಲಕ
ಒಟ್ಟೊಟ್ಟಿಗೆ ಎರಡೆರಡು ಕಾಮಗಾರಿ ಕೈಗೊಂಡಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಜನಪ್ರತಿನಿಧಿಗಳು ಏಕೆ ಈ ಬಗ್ಗೆ ಗಮನಹರಿಸುತ್ತಿಲ್ಲ. ಆಟೋದಲ್ಲಿ ಪ್ರಯಾಣ ಮಾಡುವವರಿಗೆ 30 ರೂ. ನಲ್ಲಿ ತೆರಳುತ್ತಿದ್ದ ಸ್ಥಳಕ್ಕೆ ಬದಲಿ ಮಾರ್ಗದಲ್ಲಿ ಹೋಗಲು 80-100 ರೂ. ಆಗುತ್ತಿದೆ. ಇದಕ್ಕೆ ಯಾರು ಹೊಣೆ? -ವೆಂಕಟೇಶ್, ಚಾಲಕ
ನಮ್ಮದು ಚಿಕ್ಕ ಹೋಟೆಲ್ ಆದರೂ ಜನರು ಬಂದು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದರು. ಈಗ ಸಂಚಾರ ಮಾರ್ಗ ಬದಲಾವಣೆಯಿಂದ ರಸ್ತೆಯಲ್ಲಿ ಟ್ರಾಫಿಕ್‌ನಿಂದಾಗಿ ವಾಹನ ನಿಲುಗಡೆಗೆ ಅವಕಾಶ ಇಲ್ಲದಂತಾಗಿದೆ. ಇದರಿಂದಾಗಿ ಶೇ.50 ವ್ಯಾಪಾರ ಕುಸಿದಿದೆ. -ಮಂಜುನಾಥ್, ಹೋಟೆಲ್ ಮಾಲೀಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net