ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ವೀಲಿಂಗ್​; ವಿಶೇಷ ಕಾರ್ಯಾಚರಣೆ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ

Wheeling
Published on

ಬೆಂಗಳೂರು: ಸಾರ್ವಜನಿಕ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ದ ನಗರದ ದಕ್ಷಿಣ ವಿಭಾಗದ ಸಂಚಾರ ಪೊಲೀಸರು ಹಲವು ತಿಂಗಳು ವಿಶೇಷ ಕಾರ್ಯಾಚರಣೆ ನಡೆಸಿ 26 ಪ್ರಕರಣ ದಾಖಲಿಸಿ, 26 ಮಂದಿ ಸವಾರರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ದಕ್ಷಿಣ ಸಂಚಾರ ಉಪ ವಿಭಾಗದ ವ್ಯಾಪ್ತಿಯ ಚಾಮರಾಜಪೇಟೆ ೫ನೇ ಕ್ರಾಸ್, ಹನುಮಂತನಗರ ೭ನೇ ಕ್ರಾಸ್, ಜೆ.ಪಿ.ನಗರ ಕೆಳಸೇತುವೆ, ಇಲಿಯಾಸ್ ನಗರ, ಕೆ.ಎಸ್.ಲೇಔಟ್ ರಿಂಗ್ ರಸ್ತೆ, ಗುಬ್ಬಲಾಳ, ಅಂಜನಾಪುರ ಸೇರಿ ವಿವಿಧ ರಸ್ತೆಗಳಲ್ಲಿ ಯುವಕರು ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡುವ ಪ್ರವೃತ್ತಿ ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವೀಲಿಂಗ್ ಪ್ರಕರಣಗಳ ತಡೆಗೆ ಮುಂದಾಗಿದ್ದರು.

26 ಮಂದಿ ವಶಕ್ಕೆ

ಈ ನಿಟ್ಟಿನಲ್ಲಿ ಮಫ್ತಿಯಲ್ಲಿ ಸಂಚಾರ ಪೊಲೀಸರು ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ, ವ್ಹೀಲಿಂಗ್ ಮಾಡುವ ಪುಂಡರನ್ನು ಹಿಡಿಯುವಲ್ಲಿ ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೆಯೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವ್ಹೀಲಿಂಗ್ ವಿಡಿಯೊಗಳು, ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆ ವೇಳೆ ಪತ್ತೆಯಾದ ವ್ಹೀಲಿಂಗ್ ವಾಹನಗಳು ಹಾಗೂ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ.

Wheeling

ದಕ್ಷಿಣ ಸಂಚಾರ ಉಪವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ ವ್ಹೀಲಿಂಗ್ ಸಂಬಂಧ 26 ಪ್ರಕರಣ ದಾಖಲಿಸಲಾಗಿದೆ. ಸಿಕ್ಕಿಬಿದ್ದ 26 ಮಂದಿ ಸವಾರರ ಪೈಕಿ 21 ಮಂದಿ 18 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 5 ಮಂದಿ ಅಪ್ರಾಪ್ತರು ಇದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಹನ ಮಾಲೀಕರಿಗೆ ನೋಟಿಸ್ ನೀಡಿ, ಸವಾರರಿಂದ ಮುಚ್ಚಳಿಕೆ ಬರೆಸಿಕೊಂಡು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಆರ್‌ಸಿ, ಡಿಎಲ್ ಕ್ಯಾನ್ಸಲ್ ಮಾಡುವ ಎಚ್ಚರಿಕೆ

ಆರೋಪಿಗಳು ಎರಡನೇ ಬಾರಿ ವ್ಹೀಲಿಂಗ್ ಪ್ರಕರಣದಲ್ಲಿ ಭಾಗಿಯಾಗಿಯಾದರೆ ಕಠಿಣ ಕ್ರಮ ಎಚ್ಚರಿಕೆ ನೀಡಲಾಗಿದೆ. ನ್ಯಾಯಾಲಯದಲ್ಲಿ ಶಿಕ್ಷೆಯಾದ ಬಳಿಕ ಆರೋಪಿಗಳ ವಾಹನಗಳ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ಮತ್ತು ಚಾಲನಾ ಪರವಾನಗಿ (ಡಿಎಲ್) ರದ್ಧುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿಯೂ ವ್ಹೀಲಿಂಗ್ ಮಾಡುವವರ ವಿರುದ್ಧ ಕಾರ್ಯಾಚರಣೆ ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net