ಚಾರ ಸಂಚಾರ ದುಸ್ತರ

chara
ಹೆಬ್ರಿ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಕೆಸರು ನೀರು ನಿಂತಿರುವುದು
Published on

ನರೇಂದ್ರ ಎಸ್ ಮರಸಣಿಗೆ ಹೆಬ್ರಿ

ಹೆಬ್ರಿ ಪೇಟೆ ಹಾಗೂ ಚಾರದ ಹಲವೆಡೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲವಾಗಿದ್ದು, ಸತತ ಮಳೆಯಾಗುತ್ತಿರುವುದರಿಂದ ನೀರು ರಸ್ತೆ ಮೇಲೆಯೇ ನಿಲ್ಲುತ್ತಿದ್ದು, ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ.

ಹೆಬ್ರಿಯ ಕೆಳಪೇಟೆ, ಯೂನಿಯನ್ ಬ್ಯಾಂಕ್ ಮುಂಭಾಗ, ಕಾಲೇಜು ರಸ್ತೆ, ಚಾರದ ಗಾಂಧಿನಗರ ಹಾಗೂ ನಾಗಬ್ರಹ್ಮ ಸ್ಥಾನದ ಸಮೀಪ ಎರಡು ಕಡೆಯಲ್ಲಿ ಜೋರಾಗಿ ಮಳೆ ಸುರಿದ ಸಂದರ್ಭ ನೀರು ನಿಲ್ಲುತ್ತದೆ. ಹೊಂಡಗಳಲ್ಲಿ ನೀರು ನಿಂತಿರುವುದು ಗೊತ್ತಾಗದೆ ದ್ವಿಚಕ್ರ ವಾಹನಗಳು ಅಪಘಾತಕ್ಕೊಳಗಾಗುತ್ತಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿದೆ.

ಚಾರ ಗ್ರಾಮ ಪಂಚಾಯಿತಿ ವತಿಯಿಂದ ಅವ್ಯವಸ್ಥೆ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ಚರಂಡಿ ದುರಸ್ತಿ ಮಾಡಿಕೊಡಲು ಮನವಿ ಮಾಡಲಾಗಿದ್ದು, ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ.

ಅಧಿಕಾರಿಗಳ ಬೇಜವಾಬ್ದಾರಿ

ಈಗಾಗಲೇ ಚಾರ ಪಂಚಾಯಿತಿ ವತಿಯಿಂದ ಮನವಿ ಮಾಡಿದ್ದರೂ ಲೋಕೊಪಯೋಗಿ ಇಲಾಖೆ ತನಗೂ ಇದಕ್ಕೂ ಸಂಬಂಧವಿಲ್ಲದಂತಿದೆ. ಅಧಿಕಾರಿಗಳು ಉತ್ತರಿಸುವುದರಿಂದ ನುಣುಚಿಕೊಳ್ಳುತ್ತಿದ್ದಾರೆ. ಕೆಲವು ಗುಂಡಿಗಳಿಗೆ ತೇಪೆ ಕಾರ್ಯ ನಡೆಸಿದರೂ ಪ್ರಯೋಜನವಿಲ್ಲದಾಗಿದೆ. ಇನ್ನೂ ಕೆಲವೆಡೆ ಚರಂಡಿಗಳೇ ಇಲ್ಲವಾಗಿದ್ದು, ಕೊಳಚೆ ನೀರು ರಸ್ತೆಗಳಲ್ಲೇ ಹರಿಯುತ್ತಿವೆ.

ಪೈಪ್‌ಲೈನ್ ಕಾಮಗಾರಿಯ ಅವಾಂತರ

ವಾರಾಹಿ ನೀರಾವರಿ ಕಾಮಗಾರಿಯವರ ಅವಾಂತರಗಳಿಂದ ಹಲವೆಡೆ ಚರಂಡಿಗಳಿಗೆ ಸಮಸ್ಯೆಯಾಗಿದೆ. ಬಹುತೇಕ ಕಡೆಗಳಲ್ಲಿ ಚರಂಡಿಗಳಿಗೆ ಪೈಪ್‌ಲೈನ್ ಅಳವಡಿಸಲಾಗಿದ್ದು, ಕಾಮಗಾರಿ ಅಪೂರ್ಣವಾಗಿರುವುದರಿಂದ ನೀರಿನ ಸೂಕ್ತ ಹರಿವು ಆಗುತ್ತಿಲ್ಲ. ಸಮಗ್ರ ದುರಸ್ತಿಯ ಅವಶ್ಯಕತೆ ಇದೆ.

ಸದ್ಯಕ್ಕೆ ತಾತ್ಕಾಲಿಕ ರಸ್ತೆ ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆಗೆ ನಮ್ಮ ಅನುದಾನ ನೀಡಲಾಗಿದೆ. ಈ ಬಗ್ಗೆ ಇಲಾಖೆಗೆ ತಿಳಿಸಿ ಸೂಕ್ತ ಕ್ರಮ ಜರುಗಿಸಲು ಆದೇಶಿಸುತ್ತೇನೆ.-ಡಾ.ವಿದ್ಯಾಕುಮಾರಿ ಜಿಲ್ಲಾಧಿಕಾರಿ

ರಸ್ತೆಯಲ್ಲಿ ನೀರು ಹರಿದು ಅನೇಕ ಕಡೆ ಶೇಖರಣೆಯಾಗಿದೆ. ಜೋರಾಗಿ ಮಳೆ ಬಂದಾಗ ಸ್ವಿಮ್ಮಿಂಗ್ ಪೂಲ್ನ ದರ್ಶನ ಈ ರಸ್ತೆಯಲ್ಲಿ ಆಗುತ್ತದೆ. ಚರಂಡಿ ದುರಸ್ತಿ ಮಾಡಲು ನಾವು ಸಂಬಂಧಿತರಿಗೆ ಮನವಿ ಮಾಡಿದ್ದೇವೆ.-ದಿನೇಶ್‌ಕುಮಾರ್ ಶೆಟ್ಟಿ. ಅಧ್ಯಕ್ಷ, ಚಾರ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net