ಬೆಂ-ಮೈ ಹೆದ್ದಾರಿಯಲ್ಲಿ ಸಂಚಾರ ಅಯೋಮಯ

1003904624
Published on

* ವಾಹನ ಸವಾರರಿಗೆ ತಪ್ಪದ ಕಿರಿಕಿರಿ

* ಸಂಚಾರ ಪೊಲೀಸರಿಂದ ಜಾಣ ಮೌನ

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಬೆಂಗಳೂರು&ಮೈಸೂರು ಎಕ್ಸ್​ಪ್ರೆಸ್​ ಹೈವೇಯ ಸರ್ವೀಸ್​ ರಸ್ತೆ ಹಾಗೂ ನಗರದಲ್ಲಿ ಹಾದು ಹೋಗಿರುವ ಹಳೇ ಹೆದ್ದಾರಿಯಲ್ಲಿ ರಸ್ತೆಯಲ್ಲಿಯೇ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ.

ಹೌದು. ನಗರದ ಬೆಂಗಳೂರು&ಮೈಸೂರು ಹೆದ್ದಾರಿಯ (ಹಳೆಯ ಹೆದ್ದಾರಿ) ಬದಿಯಲ್ಲೆ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡುವುದು ಸಾಮಾನ್ಯ ಎನಿಸಿದೆ. ಕೆಲ ವಾಣಿಜ್ಯ ಸಮುಚ್ಚಯಗಳ ಮುಂಭಾಗ, ಹೋಟೆಲ್​ಗಳ ಮುಂದೆ ಹೆದ್ದಾರಿಯಲ್ಲೆ ವಾಹನಗಳನ್ನು ಪಾರ್ಕಿಂಗ್​ ಮಾಡುತ್ತಿರುವ ಕಾರಣ ಹೆದ್ದಾರಿಯಲ್ಲಿ ಸಂಚಾರ ಅಯೋಮಯವಾಗಿದೆ. ಈ ಬಗ್ಗೆ ಗಮನಹರಿಸಬೇಕಾದ ಸಂಚಾರ ಪೊಲೀಸರು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ನಗರದ ಶೇರ್ವಾ ಸರ್ಕಲ್​ನಿಂದ ಚಿಕ್ಕಮಳೂರಿನವರೆಗೂ ಈ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ ನಗರದ ಅಂಚೆಕಚೇರಿ ರಸ್ತೆ, ಮೂರನೇ ಅಡ್ಡರಸ್ತೆ ಹಾಗೂ 6 ಅಡ್ಡರಸ್ತೆ ಬಳಿ ಈ ಸಮಸ್ಯೆ ಜೋರಾಗಿದೆ. ಹೊಸದಾಗಿ ಉದ್ಘಾಟನೆಗೊಂಡ ಮಾರ್ಟ್​ ಒಂದರ ಮುಂಭಾಗ ಹೆದ್ದಾರಿಯಲ್ಲಿಯೇ ವಾಹನಗಳ ಪಾರ್ಕಿಂಗ್​ ಮಾಡುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರವಿರಲಿ, ಪಾದಚಾರಿಗಳು ಸಂಚರಿಸಲು ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಿದೆ. ಗಾಂಧಿಭವನ ಸೇರಿ ಹಲವೆಡೆ ರಸ್ತೆಯಲ್ಲಿಯೇ ಖಾಸಗಿ ಬಸ್​ ಹಾಗೂ ಲಾರಿಗಳನ್ನು ನಿಲುಗಡೆ ಮಾಡುತ್ತಿರುವುದು ಸಂಚಾರ ಅವ್ಯವಸ್ಥೆಗೆ ಸಾಯಾಗಿದೆ.

ಸರ್ವೀಸ್​ ರಸ್ತೆ ದೇವರಿಗೆ ಪ್ರೀತಿ

ಎಕ್ಸ್​ಪ್ರೆಸ್​ ಹೈವೇಯ ಸರ್ವೀಸ್​ ರಸ್ತೆಯ ಸಮಸ್ಯೆ ಹೇಳತೀರದಾಗಿದೆ. ಎಕ್ಸ್​ಪ್ರೆಸ್​ ಹೈವೇಯ ಎಂಟ್ರಿ ಹಾಗೂ ಎಕ್ಸಿಟ್​ ಸ್ಥಳಗಳಲ್ಲಿ ಸಂಚಾರ ಸಮಸ್ಯೆ ಹೆಚ್ಚಾಗಿದೆ. ಹೈವೇಗೆ ತಾಲೂಕಿನ ಬೈರಾಪಟ್ಟಣ ಹಾಗೂ ಸಂಕಲಗೆರೆ ಗೇಟ್​ ಬಳಿ ಎಕ್ಸಿಟ್​ ಹಾಗೂ ಎಂಟ್ರಿಗೆ (ಆಗಮನ ಮತ್ತು ನಿರ್ಗಮನ) ಅವಕಾಶ ಕಲ್ಪಿಸಲಾಗಿದ್ದು, ಎಕ್ಸ್​ಪ್ರೆಸ್​ ಹೈವೇಯಿಂದ ಹೊರ ಬರುವವರು ಹಾಗೂ ಒಳ ಹೋಗುವವರು ಈ ಜಾಗವನ್ನೇ ಬಳಸಬೇಕಿದೆ. ಆದರೆ, ಈ ಜಾಗದ ಎರಡೂ ಕಡೆ ಇರುವ ಸರ್ವೀಸ್​ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಿರುವುದು ಸಂಚಾರ ಅವ್ಯವಸ್ಥೆ ಸೃಷ್ಟಿಸಿದೆ.

ಕಟ್ಟುನಿಟ್ಟಿನ ಕ್ರಮದ ಅವಶ್ಯ

ತಾಲೂಕಿನ ಬೈರಾಪಟ್ಟಣ ಬಳಿ ಈ ಸಮಸ್ಯೆ ಹೆಚ್ಚಾಗಿದ್ದು, ಸಂಕಲಗೆರೆ ಗೇಟ್​ ಬಳಿಯೂ ಇದೇ ಸಮಸ್ಯೆಯಾಗುತ್ತಿದೆ. ರಜಾದಿನಗಳು ಹಾಗೂ ನಿತ್ಯದ ಊಟ, ತಿಂಡಿಯ ಸಮಯದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ಸಂಚಾರಿ ಪೊಲೀಸರಾಗಲಿ ಅಥವಾ ಹೈವೇ ಗಸ್ತು ಸಿಬ್ಬಂದಿಯಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಈ ಭಾಗದ ಸಾರ್ವಜನಿಕರ ಆರೋಪವಾಗಿದೆ. ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್​ ಮಾಡಿಸುವ ಹೋಟೆಲ್​ ಹಾಗೂ ಅಂಗಡಿ ಮುಗ್ಗಟ್ಟುಗಳ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ, ಸಮಸ್ಯೆ ತಾನಾಗಿಯೇ ಕಡಿಮೆಯಾಗುತ್ತದೆ. ಆದರೆ, ಈ ವಿಚಾರವಾಗಿ ಪೊಲೀಸರು ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net