ಸಂಜೆ 6 ಗಂಟೆ ನಂತರ ಸಂಚಾರ ಬಂದ್?

20-AUG-GPT-1A
Published on

ಗುಂಡ್ಲುಪೇಟೆ: ಬಂಡೀಪುರ ರಸ್ತೆಯಲ್ಲಿ ಸಂಜೆ 6 ಗಂಟೆ ನಂತರ ಹಣ್ಣು ತರಕಾರಿ ವಾಹನಗಳ ಸಂಚಾರ ನಿರ್ಬಂಧಕ್ಕೆ ಅರಣ್ಯ ಇಲಾಖೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದು ಆನೆಯ ಕಾರಣದಿಂದ ಬಂಡೀಪುರ ರಸ್ತೆಯಲ್ಲಿ ಸಂಜೆ ನಂತರ ಹಣ್ಣು ತರಕಾರಿ ಲಾರಿ ಸಂಚಾರ ನಿರ್ಬಂಧಿಸುವುದು ಅವೈಜ್ಞಾನಿಕ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಕಾಡಾನೆಯೊಂದು ಬಂಡೀಪುರ ರಸ್ತೆಯಲ್ಲಿ ಹಾದುಹೋಗುವ ಹಣ್ಣು ತರಕಾರಿಗಳ ಲಾರಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಹಣ್ಣು ತರಕಾರಿ ಸಾಗಿಸುವ ಲಾರಿ ಚಾಲಕರಿಗೆ ದೊಡ್ಡ ಸವಾಲಾಗಿದೆ. ತಮ್ಮತ್ತ ಬರುವ ಕಾಡಾನೆಯನ್ನು ಕಂಡ ಕೂಡಲೇ ಲಾರಿ ಚಾಲಕರು ರಸ್ತೆಗೆ ಹಣ್ಣು ತರಕಾರಿ ಬಿಸಾಡಿ ಅದು ತಿನ್ನಲಾರಂಭಿಸಿದ ಕೂಡಲೇ ಮುಂದಕ್ಕೆ ಸಾಗುತ್ತಿದ್ದಾರೆ. ಇದನ್ನೇ ಅಭ್ಯಾಸ ಮಾಡಿಕೊಂಡಿರುವ ಆನೆ ಕತ್ತಲಾದ ನಂತರ ರಸ್ತೆಗೆ ಬಂದು ತರಕಾರಿ ಹಣ್ಣು ಸಾಗಣೆ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಲೇ ಇದೆ.

ಸಂಚಾರ ಸಿಕ್ಕು ಸಮಸ್ಯೆ : ರಸ್ತೆಗೆ ಕಾಡಾನೆ ಬರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಪ್ರತಿ ದಿನವೂ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೆತ್ತಿಕೊಳ್ಳ ಬೇಕಾಗಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಂಜೆ 6ರ ನಂತರ ಹಣ್ಣು ತರಕಾರಿ ಲಾರಿಗಳ ಸಂಚಾರ ನಿರ್ಬಂಧಿಸಲು ಮುಂದಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಅರಣ್ಯ ಇಲಾಖೆ ಪತ್ರ ಬರೆದಿದೆ.

ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ:

ಬಂಡೀಪುರ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ತೀವ್ರವಾಗಿದೆ. ಬಂಡೀಪುರದ 6 ಬೀಟುಗಳಿಗೆ 3 ಸಿಬ್ಬಂದಿ ಇದ್ದಾರೆ. ಇವರಿಗೆ ತಲಾ ಎರಡೆರಡು ಬೀಟ್ ಗಸ್ತು ಉಸ್ತುವಾರಿ ನೀಡಲಾಗಿದೆ. ಕಾಯಂ ಸಿಬ್ಬಂದಿ ನಿಯೋಜನೆ ಇಲ್ಲದ ಕಾರಣ ದಿನಗೂಲಿ ನೌಕರರು ಹಾಗೂ ವಾಚರುಗಳನ್ನು ಬಳಸಿಕೊಂಡು ಗಸ್ತು ನಡೆಸಲಾಗುತ್ತಿದೆ. ಎರಡು ಎಲೆಕ್ಟ್ರಿಕ್ ಬೈಕ್‌ಗಳಲ್ಲಿ ಸಿಬ್ಬಂದಿ ಗಸ್ತು ನಡೆಸುತ್ತಿದ್ದರೂ ಕೇರಳ ಮತ್ತು ತಮಿಳುನಾಡಿನ ಪ್ರವಾಸಿಗರು ವನ್ಯಜೀವಿಗಳನ್ನು ಕಂಡಕೂಡಲೇ ಫೋಟೋ ತೆಗೆಯುವುದು, ನಿರ್ಜನ ಪ್ರದೇಶದಲ್ಲಿ ಅನಧಿಕೃತವಾಗಿ ವಾಹನ ನಿಲ್ಲಿಸುವುದು, ಮೂತ್ರ ವಿಸರ್ಜನೆಗೆ ಕಾಡಿನೊಳಗೆ ಹೋಗುವುದು ಮಾಡುತ್ತಲೇ ಇದ್ದಾರೆ. ಇವರಿಗೆ ಅರಣ್ಯ ಸಿಬ್ಬಂದಿ ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದರೂ ಪ್ರವಾಸಿಗರು ಹೆಚ್ಚಾಗಿರುವ ರಜಾ ದಿನಗಳಲ್ಲಿ ತುಂಬಾ ಸವಾಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net