ಸಂಚಾರ ತಡೆ, ಸರಣಿ ಸತ್ಯಾಗ್ರಹ 30ರಂದು

18 rtl 01
Published on

ರಟ್ಟಿಹಳ್ಳಿ: ತುಂಗಭದ್ರ ನದಿಯಿಂದ ಶಿಕಾರಿಪುರ ತಾಲೂಕಿನ ಉಡುಗಣಿ-ತಾಳಗುಂಡ-ಹೊಸೂರು ನೀರಾವರಿ ಯೋಜನೆಯ ಮೂಲಕ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ರಟ್ಟಿಹಳ್ಳಿ-ಹಿರೇಕೆರೂರು ತಾಲೂಕಿನ ಅನೇಕ ರೈತರ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಿರುವ ನೋಟಿಸ್ ಜಾರಿಯ ಕ್ರಮ ವಿರೋಧಿಸಿ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ ಮತ್ತು ತಾಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳಿಂದ ನ. 30ರಂದು ರಸ್ತೆ ಸಂಚಾರ ತಡೆ, ಸರಣಿ ಸತ್ಯಾಗ್ರಹ ಜರುಗಲಿದೆ.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಜರುಗಿದ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ರಂಗಪ್ಪ ಬಡಪ್ಪಳವರ ಮಾತನಾಡಿ, ಶಿಕಾರಿಪುರದ ಈ ನೀರಾವರಿ ಯೋಜನೆಗೆ ನಮ್ಮ ತಾಲೂಕಿನ ರೈತರ ಸುಮಾರು 1067 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಕೇವಲ ನೀರಾವರಿ ಯೋಜನೆಗೆ ಪೈಪ್​ಲೈನ್ ಅಳವಡಿಸುವುದಾದರೆ ನಮ್ಮ ವಿರೋಧವಿಲ್ಲ. ಈ ಯೋಜನೆಗೆ ಸರ್ವಿಸ್ ರೋಡ್​ಗಾಗಿ ಸುಮಾರು 30 ಅಡಿ ಅಗಲದ 17 ಕಿ.ಮೀ. ರಸ್ತೆಗಾಗಿ ರೈತರ ಜಮೀನನ್ನು ಬಳಸಲಾಗುತ್ತಿದೆ. ಇದರಿಂದ ಮಾಜಿ ಸೈನಿಕರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಸಣ್ಣ ಹಿಡುವಳಿದಾರರು ತಮ್ಮ ಭೂಮಿ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ರೈತ ಮುಖಂಡರಾದ ವಿನಯ ಪಾಟೀಲ ಮತ್ತು ಉಜಿನೆಪ್ಪ ಕೋಡಿಹಳ್ಳಿ ಮಾತನಾಡಿ, ಭೂ ಸ್ವಾಧೀನ ಬಗ್ಗೆ ಯಾವುದೇ ಮಾಹಿತಿ ನೀಡದೇ ನೇರವಾಗಿ ನೋಟಿಸ್ ನೀಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಬಗ್ಗೆ ಹಲವು ಭಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಅಧಿಕಾರಿಗಳು ಕೇವಲ ಭರವಸೆ ನೀಡಿ ರಾಜಕಾರಣಿಗಳ ಆದೇಶಕ್ಕೆ ಶರಣಾಗುತ್ತಿದ್ದಾರೆ. ಸರ್ಕಾರ ಈ ಯೋಜನೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ನ. 30ರಂದು ಜರುಗಲಿರುವ ಸರಣಿ ಸತ್ಯಾಗ್ರಹದಲ್ಲಿ ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶ್ರೀಗಳು, ತಿಪ್ಪಾಯಿಕೊಪ್ಪ ಮಠದ ಶ್ರೀಗಳು, ವಕೀಲರಾದ ಬಿ.ಡಿ. ಹಿರೇಮಠ, ಶಂಕರ ಅಂಬಲಿ ಸೇರಿ ಮಹಿಳಾ ಸಂಘಟನೆಗಳು, ರೈತ ಹಾಗೂ ಕನ್ನಡ ಪರ ಸಂಘಟನೆಗಳು ಭಾಗವಹಿಸಲಿವೆ ಎಂದರು. ಹೋರಾಟ ಸಮಿತಿಯ ಬಿ.ಕೆ. ಮಂಜುನಾಥ, ಹ.ಬ. ಕುಬೇರಪ್ಪ, ಶೇಖರಗೌಡ ಪಾಟೀಲ, ಭೀಮಪ್ಪ ವೆಂಕಣ್ಣನವರ, ಸಣ್ಣಪ್ಪ ವೆಂಕಣ್ಣನವರ, ಭೈರನಗೌಡ ಸಣ್ಣಿಂಗಪ್ಪನವರ, ಆರ್.ಎಸ್. ದೊಡ್ಡಪ್ಪನವರ, ಬಿ.ಎಚ್. ರಂಗಪ್ಪ, ಪರ್ವತಪ್ಪ ಅಜಗೋಳ, ಚಂದ್ರಗೌಡ ಪಾಟೀಲ ಇತರರು ಇದ್ದರು.

ಕೃಷಿ ಸಚಿವರಿಗೆ ಮಾಹಿತಿ ಕೊರತೆ: ಈ ಯೋಜನೆಯಿಂದ ಯಾವುದೇ ರೈತರ ಭೂಮಿಗೆ ತೊಂದರೆಯಾಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಮಾಹಿತಿ ನೀಡಿದ್ದರು. ಸಚಿವರು ಸರಿಯಾಗಿ ಸರ್ಕಾರದ ಆದೇಶವನ್ನು ಒಮ್ಮೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಆದೇಶದಲ್ಲಿ ಸರ್ವಿಸ್ ರಸ್ತೆ ಮತ್ತು ಪೈಪ್​ಲೈನ್​ಗಾಗಿ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಯೋಜನೆಗಾಗಿ ರೈತರು ಒಂದಿಂಚೂ ಭೂಮಿ ನೀಡುವುದಿಲ್ಲ. ಸರ್ಕಾರ ತನ್ನ ಯೋಜನೆಯನ್ನು ದಬ್ಬಾಳಿಕೆ ಮತ್ತು ದೌರ್ಜನ್ಯದಿಂದ ಮುಂದುವರೆಸಿದರೆ ನಮ್ಮ ಸಮಾಧಿಯ ಮೇಲೆ ಮುಂದುವರಿಸಲಿ ಎಂದು ಹೋರಾಟ ಸಮಿತಿಯ ಅಧ್ಯಕ್ಷ ರಂಗಪ್ಪ ಬಡಪ್ಪಳವರ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net