ಪಾರಂಪಾರಿಕ ನಾಟಿ ಔಷಧ ಪರಿಣಾಮಕಾರಿ

FotoJet (1)
Published on

ಸಾರ್ವಜನಿಕ ಆಸ್ಪತ್ರೆ ಹಿರಿಯ ಫಾರ್ಮಸಿಸ್ಟ್ ಎಂ.ವೇದಮೂರ್ತಿ ಅನಿಸಿಕೆ

 ಚನ್ನಪಟ್ಟಣ : ಪಾರಂಪಾರಿಕ ನಾಟಿ ಔಷಧ ಇಂದಿಗೂ ಹೆಚ್ಚು ಪರಿಣಾಮಕಾರಿಯಾಗಿದೆ. ಇವುಗಳ ಬಗ್ಗೆ ಅಸಡ್ಡೆ ಸಲ್ಲದು ಎಂದು ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ಎಂ.ವೇದಮೂರ್ತಿ ಹೇಳಿದರು.

ನಗರದ ಒಕ್ಕಲಿಗರ ಸಾರ್ವಜನಿಕರ ವಿದ್ಯಾಸಂಸ್ಥೆ ಆವರಣದಲ್ಲಿ ಅಸಿರ ಚಿತ್ರಕಲಾ ಇನ್‌ಸ್ಟಿಟ್ಯೂಟ್‌ನಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಿರುತೆರೆ ಚಿತ್ರ ನಿರ್ದೇಶಕ ಕೃಷಮೂರ್ತಿ ಅವರ ಸಂತಾನಲಕ್ಷ್ಮೀ ಕಿರುಚಿತ್ರ ಬಿಡುಗಡೆ, ವ್ಯಂಗ್ಯಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನ ಮತ್ತು ಜಾನಪದ ಗೀತಗಾಯನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪೂರ್ವಿಕರ ನಾಟಿ ವೈದ್ಯ ಪದ್ಧತಿ ಮೈಗೂಡಿಸಿಕೊಂಡಿರುವ ಡಾ.ಕೆ.ಟಿ.ಲಕ್ಷ್ಮಮ್ಮ ಅವರ ಸೇವೆ ಸಮಾಜಕ್ಕೆ ಅನನ್ಯ. ಅವರ ಕರಿತಾದ ಕಿರುಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದರು.

ಕಾಂಗ್ರೆಸ್ ಮುಖಂಡ ಡಾ.ಭಗತ್‌ರಾಮ್ ಮಾತನಾಡಿ, ಸಂತಾನವಿಲ್ಲದೆ ನೊಂದ ನೂರಾರು ಕುಟುಂಬಗಳಿಗೆ ಕೆ.ಟಿ.ಲಕ್ಷ್ಮಮ್ಮ ಬಳಕಾಗಿದ್ದಾರೆ. ವೈದ್ಯಕೀಯ ಕ್ಷೇತ್ರ ಬೆಳೆದಿರಬಹುದು. ಆದರೆ, ನಾಟಿ ವೈದ್ಯಕೀಯ ಪುರಾತನವಾಗಿದೆ ಎಂದರು.

ನಾಟಿ ವೈದ್ಯೆ ಡಾ.ಕೆ.ಟಿ.ಲಕ್ಷ್ಮಮ್ಮ ಮಾತನಾಡಿ, ವ್ಯಂಗ್ಯ ಚಿತ್ರಕಲೆಗಳಿಗೆ ಮಾತನಾಡುವ ಶಕ್ತಿ ಇದೆ. ಅಸಿರ ಚಿತ್ರಕಲಾ ಸಂಸ್ಥೆಯನ್ನು ಪ್ರಾರಂಭ ಮಾಡಿ ಅದರಡಿ ಸಾವಿರಾರು ಕಲಾ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡಿರುವ ಹಿರಿಯ ಪತ್ರಕರ್ತ ಹಾಗೂ ಕಲಾವಿದ ರಮೇಶ್ ಅಕ್ಕೂರ್ ಅವರು ರಚಿಸುವ ವ್ಯಂಗ್ಯ ಚಿತ್ರಗಳು ಸಮಾಜದಲ್ಲಿರುವ ಭ್ರಷ್ಟತೆಯ ತೆಗೆ ಆಳುವವರಿಗೆ ಚಾಟಿ ಏಟು ಬೀಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

ಎಸ್.ಡಿ.ಎಂ.ಸಿ.ರಾಜ್ಯ ಉಪಾಧ್ಯಕ್ಷ ಎಂ.ಎನ್.ಶಂಭೂಗೌಡ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಅಭಿಲಾಷ್ ಮಾತನಾಡಿದರು.

ಕಿರುಚಿತ್ರ ನಿರ್ದೇಶಕ ಕೃಷ್ಣಮೂರ್ತಿ, ಮುಖಂಡರಾದ ಇಬ್ರಾಹಿಂ, ಪೇಟೇಚೇರಿ ಕರ್ಣ, ಮುಕುಂದ, ಅಬ್ಬೂರ್ ಆನಂದ್, ಸಿಂಲಿಂ ಪ್ರತಿಷ್ಠಾನದ ಆದರ್ಶಕುಮಾರ್ ಸೇರಿದಂತೆ ಹಲವರು ಇದ್ದರು.

ಜಾನಪದ ಗಾಯಕರಾದ ಮಳೂರು ಮಹದೇವ್, ಸುಣ್ಣಘಟ್ಟ ಗಂಗಾಧರ್ ಹಾಗೂ ಚಕ್ಕರೆ ಸಿದ್ದರಾಜು ಗೀತಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net