

ಬಂಟ್ವಾಳ: ಕೋಳಿಗೆ ಹೂವಿನ ಮಾಲೆ ಹಾಕಿ ಪೂಜಿಸಿ ಬಳಿಕ ಸಾಂಪ್ರದಾಯಿಕ ಕೋಳಿ ಅಂಕ ನಡೆಸುವ ವಿಶಿಷ್ಟ ಕಾರ್ಯಕ್ರಮವೊಂದು ಪುಂಜಾಲಕಟ್ಟೆಯ ನಾಕುನಾಡು ಎಂಬಲ್ಲಿ ಗುರುವಾರ ನಡೆಯಿತು. ಈ ಕ್ರಮಕ್ಕೆ ಶತಮಾನಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ.
ಈ ಭಾಗದಲ್ಲಿ ಬಿಳಿ ಹುಂಜ ಕೋಳಿಗೆ ಪಟ್ಟಾಭಿಷೇಕ ನಡೆದಿತ್ತು ಎಂಬ ನಂಬಿಕೆ ಇದೆ. ಹೀಗಾಗಿ ಇಂದಿಗೂ ದೀಪಾವಳಿಯ ನರಕ ಚತುರ್ದಶಿಯಂದು ಕೋಳಿ ಪೂಜೆ ಮಾಡಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಸ್ವಸ್ತಿಕವಿಟ್ಟು ಶುದ್ಧ ಬಿಳಿ ಹುಂಜ (ತುಳುವಿನಲ್ಲಿ ಸಾಸ್ರ ಬೊಳ್ಳೆ)ಕ್ಕೆ ಹೂವಿನ ಮಾಲಾರ್ಪಣೆ ಮಾಡಲಾಗುತ್ತದೆ. ಅದಕ್ಕೆ ಅಕ್ಕಿಯನ್ನು ತಿನ್ನಲು ಹಾಕಿದ ಬಳಿಕ ಗೂಟದಲ್ಲಿ ಕಟ್ಟಿ, ಹಾಕಲಾಗುತ್ತದೆ. ಬಳಿಕ ಅಲ್ಲಿ ಕೋಳಿ ಅಂಕ ನಡೆಯುತ್ತದೆ. ಇದು ಇಲ್ಲಿನ ಸಂಪ್ರದಾಯ ಎನ್ನುತ್ತಾರೆ ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ.
ಕಾರ್ಯಕ್ರಮದಲ್ಲಿ ಗಂಗಾಧರ ಪೂಜಾರಿ ಕಜೆಕಾರು, ಶೀನ ಶೆಟ್ಟಿ ಮಜಲೋಡಿ, ನಾರಾಯಣ ಪೂಜಾರಿ ನಾಕನಾಡು, ಭರತ್ ನಾಕನಾಡು, ಪುರುಷೋತ್ತಮ ನಾಕನಾಡು, ಲಕ್ಷ್ಮಣ ನಾಕನಾಡು ಮತ್ತಿತರರಿದ್ದರು.
ಅಂಕಕ್ಕೆ ಕೋಳಿ ಬಳಕೆ ನಿಷಿದ್ಧ
ಪೂಜೆ ಮಾಡಿದ ಕೋಳಿಯನ್ನು ಕೋಳಿ ಅಂಕಕ್ಕೆ ಉಪಯೋಗಿಸುವಂತಿಲ್ಲ. ಒಂದು ಕೋಳಿಗೆ ಪೂಜೆ ಶುರು ಮಾಡಿದರೆ ಬಳಿಕ ಅದು ಬದುಕಿರುವವರೆಗೆ ಪೂಜೆಗೆ ತರಬೇಕು. ಈ ಹಿಂದೆ ಪೂಜೆಗೊಳ್ಳುತ್ತಿದ್ದ ಪೂಂಜ 15 ವರ್ಷಗಳ ಕಾಲ ಬದುಕಿತ್ತಂತೆ. ಅದರ ಬಳಿಕ ಈಗಿರುವ ಹುಂಜನಿಗೆ 12 ವರ್ಷ ತುಂಬಿದೆ ಎಂದು ಸ್ಥಳೀಯರಾದ ಲಕ್ಷ್ಮಣ ಹೆಗ್ಡೆ ಹೇಳುತ್ತಾರೆ.