ಕಾಸರಗೋಡು: ಮಧೂರು ಸಮೀಪದ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ಕಾರ್ತಿಕ ದೀಪೋತ್ಸವ ಶನಿವಾರ ಆರಂಭಗೊಂಡಿತು. ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿ ನೇತೃತ್ವದಲ್ಲಿ ಗಣಪತಿ ಹೋಮ, ರಕ್ತೇಶ್ವರಿ ತಂಬಿಲ, ನಾಗತಂಬಿಲ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಅನಂತಪದ್ಮನಾಭ ಮಹಿಳಾ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನ ಸೇವೆ ಜರುಗಿತು. ಪುಳ್ಕೂರು ಶ್ರೀ ಮಹಾದೇವ ಭಜನಾ ಸಂಘದ ವತಿಯಿಂದ ಧಾರ್ಮಿಕ ಮುಂದಾಳು ಡಾ.ವೆಂಕಟರಮಣ ಹೊಳ್ಳ ಕಾಸರಗೋಡು ಅವರಿಗೆ ಗೌರವ ಸನ್ಮಾನ ನಡೆಯಿತು.
ಕ್ಷೇತ್ರದ ತಂತ್ರವರ್ಯ ಬ್ರಹ್ಮಶ್ರೀ ಇರುವೈಲು ಕೃಷ್ಣ ದಾಸ ತಂತ್ರಿ ಸನ್ಮಾನಿಸಿದರು. ಪ್ರತಿ ದಿನ ಸಂಜೆ 7 ಗಂಟೆಗೆ ಭಜನೆ ಪ್ರಾರಂಭವಾಗಿ ರಾತ್ರಿ 8.30ಕ್ಕೆ ಮಹಾಮಂಗಳಾರತಿ ನಡೆಯಲಿರುವುದು. ಪ್ರತಿದಿನ ಆಹ್ವಾನಿತ ಭಜನಾ ತಂಡಗಳಿಂದ ಭಜನೆ ಮತ್ತು ಮಹಾಪೂಜೆ ನಡೆಯುವುದು. ಡಿ.2ರಂದು ಕಾರ್ತಿಕ ದೀಪೋತ್ಸವ ಬಲಿವಾಡುಕೂಟದೊಂದಿಗೆ ಸಂಪನ್ನಗೊಳ್ಳಲಿರುವುದು.