ಬಡವರ ಬಾದಾಮಿ ಜತೆ ಬೊಂಬೆಗಳ ಖರೀದಿಯೂ ಜೋರು; ಕಡಲೆಕಾಯಿ ಪರಿಷೆಯಲ್ಲಿ ಆಟಿಕೆ ಬದಲು ಬೊಂಬೆ ಖರೀದಿ ಉತ್ಸಾಹ

Doll
Published on

ಸುಶ್ಮಿತಾ.ಎಂ ಬೆಂಗಳೂರು
ನಾಡಹಬ್ಬ ದಸರಾ ವೇಳೆ ಮನೆ ಮನೆಗಳಲ್ಲಿ ಕಾಣಸಿಗುವ ಗೊಂಬೆಗಳ ಪ್ರದರ್ಶನ ಎಲ್ಲ ವಯೋಮಾನದವರನ್ನು ತನ್ನತ್ತ ಆಕರ್ಷಿಸುತ್ತದೆ. ಅದರಲ್ಲೂ ಮಕ್ಕಳು ಹೆಚ್ಚು ಇಷ್ಟಪಡುವ ಬೊಂಬೆಗಳು ಈಗ ಹೊಸ ವಿನ್ಯಾಸದಲ್ಲಿ ಲಭ್ಯವಿದೆ. ಈ ಬಾರಿಯ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ‘ಬಡವರ ಬಾದಾಮಿ’ ಮಾರಾಟದ ಜತೆಗೆ ಗೊಂಬೆಗಳ ಖರೀದಿಯೂ ಜೋರಾಗಿತ್ತು.

ಕರಕುಶಲಕರ್ಮಿಗಳು ಶ್ರಮವಹಿಸಿ ತಯಾರಿಸಿರುವ ವಿವಿಧ ರೂಪದ ಬೊಂಬೆಗಳು ಜನರನ್ನು ತನ್ನತ್ತ ಆಕರ್ಷಿಸಿತು. ಸಾಂಪ್ರದಾಯಿಕ ಗೊಂಬೆಗಳಲ್ಲದೆ ಬಟ್ಟೆ, ಲೆದರ್ ಸೇರಿದಂತೆ ಇತರ ವಸ್ತುಗಳನ್ನು ಬಳಸಿ ತಯಾರಿಸಿರುವುದು ಗ್ರಾಹಕರಿಗೆ ಇಷ್ಟವಾದವು. ಅದರಲ್ಲೂ ಮಣ್ಣಿನ ಗೊಂಬೆಗಳು ಹಾಗೂ ಲೋಹದಲ್ಲಿ ತಯಾರಿಸಿರುವ ವರ್ಣಮಯ ಗೊಂಬೆಗಳನ್ನು ಜನರನ್ನು ಸೂಜಿಗಲ್ಲಿನಂತೆ ಸೆಳೆದವು. ಆಟಿಕೆ ಗೊಂಬೆಗಳಲ್ಲದೆ ಮನೆಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಗೊಂಬೆಗಳು, ದೇವರ ಚಿತ್ರಗಳನ್ನು ಹೋಲುವ ಹಾಗೂ ಗ್‌ಟಿಗಾಗಿ ನೀಡುವ ಬೊಂಬೆಗಳು ಒಂದಕ್ಕಿಂತ ಒಂದು ಚೆಂದವಾಗಿದ್ದವು. ಇವುಗಳ ಕುರಿತು ಗೊಂಬೆ ತಯಾರಕರು ಜನರಿಗೆ ಮಾಹಿತಿ ನೀಡಿ ಮಾರಾಟ ಮಾಡಿದರು.

ಧಾರ್ಮಿಕ ಹಿನ್ನೆಲೆ ಗೊಂಬೆಗಳಿಗೆ ಬೇಡಿಕೆ

ರಾಧಾಕೃಷ್ಣ, ರಾಮಸೀತೆ, ಲಕ್ಷ್ಮೀ ದೇವಿ, ಗೋಮಾತೆ, ಶಿವ, ಬುದ್ಧ ಸೇರಿ ಧಾರ್ಮಿಕ ಹಿನ್ನೆಲೆಯ ಗೊಂಬೆಗಳು ರಾರಾಜಿಸುತ್ತಿವೆ. ಇದಲ್ಲದೆ ಆನೆ, ಕುದುರೆ, ನವಿಲು, ಹೂದಾನಿ ಅಂತಹ ಮನೆಯ ಅಲಂಕಾರಕ್ಕೆ ಬಳಸುವ ಗೊಂಬೆಗಳ ಖರೀದಿಗೆ ಜನ ಮುಗಿಬಿದ್ದಿದ್ದು ಕಂಡುಬಂದಿತು. ಜಾತ್ರೆಯಲ್ಲಿ ಗೊಂಬೆ ಮಾರಾಟ ಮಾಡುವವರಲ್ಲಿ ಹೆಚ್ಚಿನವರು ರಾಜಸ್ಥಾನದ ಮೂಲದವರಾಗಿದ್ದರು. ಬದುಕು ಕಟ್ಟಿಕೊಳ್ಳಲು ಕುಲಕಸುಬಾದ ಗೊಂಬೆ ತಯಾರಿಕೆಯನ್ನು ಈಗಲೂ ವೃತ್ತಿಯನ್ನಾಗಿ ಮಾಡಿಕೊಂಡಿದ್ದೇವೆ. ಇದುವೇ ನಮ್ಮ ಜೀವನಕ್ಕೆ ಆಧಾರ. ತವರು ರಾಜ್ಯ ಬಿಟ್ಟು ಬೆಂಗಳೂರಿಗೆ ಬಂದು ನೆಲೆಯೂರಿದ್ದೇವೆ. ವಿವಿಧ ಬಗೆಯ ಬಣ್ಣಗಳ ಗೊಂಬೆ, ದೇವರ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎನ್ನುತ್ತಾರೆ ಗೊಂಬೆ ವ್ಯಾಪಾರಿ ಕೃಷ್ಣ.

ಈ ವೃತ್ತಿ ನನಗೆ ನನ್ನ ತಾಯಿಯಿಂದ ಬಂದಿರುವಂತಹದು. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಮೇಲೆ ಮನೆ ನಿಭಾಯಿಸುವ ಕರ್ತವ್ಯ ಹೆಗಲೇರಿದ್ದ ಗೊಂಬೆ ವ್ಯಾಪಾರ ಅನಿವಾರ್ಯವಾಗಿದೆ. ಕೃಷ್ಣ ಜಯಂತಿ ವೇಳೆ ಇಸ್ಕಾನ್ ಟೆಂಪಲ್‌ನಲ್ಲಿ ಗೊಂಬೆಗಳನ್ನು ಮಾರುತ್ತೇನೆ. ಗೊಂಬೆಗಳ ವಿನ್ಯಾಸ, ಆಕಾರ ಆಧರಿಸಿ 100 ರೂ. ನಿಂದ 1000 ರೂ. ವರೆಗೂ ಬೆಲೆ ಇದೆ. ನಮ್ಮಲ್ಲಿ ಆನೆ, ಬುದ್ಧ, ಶಿವ, ರಾಧಾಕೃಷ್ಣ ಹೀಗೆ ವಿವಿಧ ರೀತಿಯ ಗೊಂಬೆಗಳು ಸಿಗುತ್ತವೆ.
- ಜಿತೇಂದ್ರ, ಗೊಂಬೆ ವ್ಯಾಪಾರಿ

ನಾನು ಗೊಂಬೆಗಳನ್ನು ಕೋಲ್ಕತ್ತಾ, ಆಂಧ್ರಪ್ರದೇಶ, ತಮಿಳನಾಡು ಹೀಗೆ ಬೇರೆ ಬೇರೆ ರಾಜ್ಯಗಳಿಂದ ತಂದು ಅದಕ್ಕೆ ಬಣ್ಣ ಹಚ್ಚಿ ಮಾರಾಟ ಮಾಡುತ್ತೇನೆ. ಈ ಕೆಲಸ ನಮ್ಮ ತಂದೆಯಿಂದ ಕಲಿತುಕೊಂಡು ಮುಂದುವರಿಸಿಕೊಂಡು ಬಂದಿದೇನೆ. ಜಾತ್ರೆಗಳಲ್ಲಿ ಹೆಚ್ಚು ಗೊಂಬೆಗಳು ಸೇಲ್ ಆಗುವುದರಿಂದ ನಮಗೆ ಲಾಭ ಸಿಗುತ್ತದೆ.
- ದಿನೇಶ ಪಿ, ಗೊಂಬೆಗಳ ವ್ಯಾಪಾರಿ

ನಮಗೆ ಇಂತಹ ಪ್ರಕೃತಿ ಸ್ನೇಹಿ ಗೊಂಬೆಗಳು ತುಂಬಾ ಇಷ್ಟ. ಮನೆಯ ಅಲಂಕಾರಕ್ಕು ಒಳ್ಳೆಯದು. ಹೀಗೆ ಕೈಯಿಂದ ಮಾಡಿರುವವರನ್ನು ಪ್ರೋತ್ಸಾಹಿಸಬೇಕು. ಅದಕ್ಕೆ ನಾವು ಇಂತಹ ವಸ್ತುಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತೇವೆ. ಪ್ರತಿಯೊಬ್ಬರು ಇಂತಹ ಪರಿಸರ ಸ್ನೇಹಿ ಗೊಂಬೆಗಳನ್ನು ಖರೀದಿಸುವುದು ಸೂಕ್ತ.
- ಉದಯ ಬಾನು, ಗ್ರಾಹಕಿ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net