ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಟ್ರಾೃಕ್ಟರ್ ರ‌್ಯಾಲಿ

ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಟ್ರಾೃಕ್ಟರ್ ರ‌್ಯಾಲಿ
Published on

ಯಳಂದೂರು: ದೇಶದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಜ.26ರ ಗಣರಾಜ್ಯೋತ್ಸವ ದಿನದಂದು ದೇಶಾದ್ಯಂತ ಟ್ರಾೃಕ್ಟರ್ ರ‌್ಯಾಲಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲೂ ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ ನೀಡಿದರು.

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಬುಧವಾರ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ರೈತರ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ಡಾ.ಸ್ವಾಮಿನಾಥನ್ ವರದಿ ಜಾರಿ, ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಸಂಘಟನೆ, ರಾಷ್ಟ್ರೀಯ ಸಂಚಾಲಕ ಜಗಜಿತ್‌ಸಿಂಗ್ ದಲ್ಲೇವಾಲ್ ಅವರು 53 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಿಯ ರಂಜನ್ ಹಾಗೂ ಪಂಜಾಬ್ ಸರ್ಕಾರದ ಪೊಲೀಸ್ ಮಹಾ ನಿರ್ದೇಶಕರು ಅಧಿಕಾರಿಗಳ ತಂಡ ಚಳವಳಿ ನಡೆಯುತ್ತಿರುವ ಕನೋರಿ ಬಾರ್ಡರ್‌ಗೆ ನಾಲ್ಕು ದಿನಗಳ ಹಿಂದೆ ತೆರಳಿ ಫೆಬ್ರವರಿ 14ರಂದು ಚಂಡೀಗಢದಲ್ಲಿ ಚಳವಳಿ ನಡೆಸುತ್ತಿರುವ ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಲಿಖಿತ ಭರವಸೆ ನೀಡಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಉಪವಾಸ ನಿರತ ದಲ್ಲೇವಾಲ್ ವೈದ್ಯಕೀಯ ಚಿಕಿತ್ಸೆ ಪಡೆಯಲು ಒಪ್ಪಿರುವುದು ರೈತರ ಹೋರಾಟಕ್ಕೆ ಶಕ್ತಿ ಹೆಚ್ಚಿಸಿದೆ. ಇವರ ಉಪವಾಸ ಬೆಂಬಲಿಸಿ 124 ರೈತರು ಪ್ರಾಣ ತ್ಯಾಗಕ್ಕೆ ಸಿದ್ಧ ಎಂದು ನಾಲ್ಕು ದಿನಗಳಿಂದ ಉಪವಾಸ ಆರಂಭಿಸಿದ್ದರು. ಅವರು ಕೂಡ ಉಪವಾಸವನ್ನು ಕೈಬಿಟ್ಟಿದ್ದಾರೆ. ಆದರೆ, ಸಮಸ್ಯೆ ಬಗೆಹರಿಯುವ ತನಕ ಹೋರಾಟ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದರು.

ದೇಶದ ಸ್ವಾತಂತ್ರೃಕ್ಕಾಗಿ ಹೋರಾಟ ಮಾಡಿ ಪ್ರಾಣ ಕಳೆದುಕೊಂಡ ಸ್ವಾತಂತ್ರೃ ಹೋರಾಟಗಾರರು, ದೇಶದ ಗಡಿಯಲ್ಲಿ ಗಡಿ ರಕ್ಷಣೆಗಾಗಿ ಹುತಾತ್ಮರಾದ ಸೈನಿಕರು ಹಾಗೂ ದೇಶದ ಜನರ ಆಹಾರ ಭದ್ರತೆಯಾಗಿ ದುಡಿದು ಪ್ರಾಣ ಕಳೆದುಕೊಂಡು ಹುತಾತ್ಮರಾದ ರೈತರ ನೆನಪಿನ ದಿನವನ್ನು ದಾವಣಗೆರೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಜ.30ರಂದು ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಗಳ ಹಾವಳಿ ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಯುವಕರ ಭವಿಷ್ಯ ಹಾಳು ಮಾಡುತ್ತಿರುವ ಆನ್‌ಲೈನ್ ಗೇಮ್ ನಿಷೇಧಿಸಲು ರಾಜ್ಯಾದ್ಯಂತ ಹೋರಾಟ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ರೇವಣ್ಣ, ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ, ಅತ್ತಹಳ್ಳಿ ದೇವರಾಜ್, ಪಿ. ಸೋಮಶೇಖರ್, ಬಡಗಲಪುರ ನಾಗರಾಜ್, ಕಿರಗಸೂರ್ ಶಂಕರ್, ಉಡಿಗಾಲ ಸುಂದರಪ್ಪ, ಸತೀಶ, ನವೀನ್, ಶಿವಸ್ವಾಮಿ, ದೊಡ್ಡಿಂದುವಾಡಿ ಮಾದೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ನಾಗೇಶ್, ಮಂಜುನಾಥ್, ರಾಜೇಶ, ನೀಲಕಂಠಪ್ಪ, ಸುನೀಲ್, ಪ್ರದೀಪ್, ಪ್ರಸಾದ್ ನಾಯ್ಕ, ಅಪ್ಪಣ್ಣ, ಬಸವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net