ಪಾಂಡವಪುರ: ಅತಿವೇಗ ಮತ್ತು ಅಜಾಗರೂಕ ಚಾಲನೆ ಮಾಡಿ ಅಪಘಾತವೆಸಗಿದ್ದ ಟ್ರ್ಯಾಕ್ಟರ್ ಚಾಲಕನಿಗೆ ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯ 7 ತಿಂಗಳು 15 ದಿವಸ ಕಾರಾಗೃಹ ಶಿಕ್ಷೆ ಹಾಗೂ 7 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಕ್ಯಾತನಹಳ್ಳಿಯಿಂದ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆೆ 2022, ಏ.11 ರಂದು ಸಂಜೆ ಸೈಕಲ್‌ನಲ್ಲಿ ತೆರಳುತ್ತಿದ್ದ ಹೊನ್ನಯ್ಯ ಎಂಬಾತನಿಗೆ ಎದುರಿನಿಂದ ಅತಿವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಆರ್.ವಿವೇಕಾನಂದ ಆರೋಪಿ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಮಹೇಶ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ ತನಿಖಾಧಿಕಾರಿ ಎಚ್.ಆರ್.ವಿವೇಕಾನಂದ, ಪ್ರಕರಣದ ಮೇಲುಸ್ತುವಾರಿ ಬಿ.ಜಿ.ಕುಮಾರ್, ತನಿಖಾ ಸಹಾಯಕರಾದ ಕೆ.ಶ್ರೀನಿವಾಸ ಮೂರ್ತಿ, ನ್ಯಾಯಾಲಯದ ಲಿಂಗಾಮಣಿ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಎಚ್.ಎಸ್.ಮುರುಳಿ ಪ್ರಶಂಸಿದ್ದಾರೆ.
ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಜಿ.ಪಿ.ಸುಧಾಮಣಿ ವಾದ ಮಂಡಿಸಿದರು.