ಟೌನ್‌ಶಿಪ್ ನಿರ್ಮಾಣದ ಆತಂಕ !

FotoJet
Published on

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರನ್ನು ಭೇಟಿಯಾದ ರೈತರು


ಬಿಡದಿ : ಬಿಡದಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ರೂಪುಗೊಂಡಿದ್ದ ಯೋಜನೆ ಬಗ್ಗೆ ಪರ-ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಆ ಭಾಗದ ರೈತರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ.
ಕಳೆದ 18 ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ಟೌನ್‌ಶಿಪ್ ಯೋಜನೆಗೆ ಕಾಂಗ್ರೆಸ್ ಸರ್ಕಾರ ಮರುಜೀವ ಕೊಡಲು ಮುಂದಾದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನೋಟಿಪಿಕೇಷನ್‌ಗೆ ಮುಂದಾಗಿದೆ. ಇದರಿಂದಾಗಿ ರೈತರಲ್ಲಿ ಆತಂಕ ಮೂಡಿದ್ದು, ಈ ಬಗ್ಗೆ ಚರ್ಚೆ ಮಾಡಲು ಶನಿವಾರ ಮಾಜಿ ಶಾಸಕ ಎ.ಮಂಜುನಾಥ್ ಅವರ ನೇತೃತ್ವದಲ್ಲಿ ರೈತರು ಬೆಂಗಳೂರಿನ ಜೆ.ಪಿ. ಭವನದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ರೈತರ ಭೇಟಿ ವೇಳೆ ಕುಮಾರಸ್ವಾಮಿ ಮಾತನಾಡಿ, ನಾನು ಮೊದಲ ಬಾರಿಗೆ ಸಿಎಂ ಆಗಿದ್ದ ವೇಳೆ ರಾಜ್ಯದ 4 ಕಡೆ ಟೌನ್ ಶಿಪ್ ಮಾಡಲು ಯೋಜನೆ ರೂಪಿಸಲಾಗಿತ್ತು. ಇದರ ಭಾಗವಾಗಿ ಬಿಡದಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಪಂ ಒಳಗೊಂಡತೆ 10 ಸಾವಿರ ಎಕರೆಯಲ್ಲಿ ಟೌನ್‌ಶಿಪ್ ಮಾಡಲು ಯೋಜನೆ ರೂಪಿಸಲಾಗಿತ್ತು. ಡಿಎ್ಎಲ್ ಕಂಪನಿ ಜತೆಗೆ ಮಾತುಕತೆ ನಡೆಸಿ ಇನ್ನೇನು ಒಡಂಬಡಿಕೆ ಮಾಡಿಕೊಳ್ಳುವಷ್ಟರಲ್ಲಿ ನಮ್ಮ ಸರ್ಕಾರ ಮುರಿದು ಬಿದ್ದಿತ್ತು ಎಂದರು.
ನಮ್ಮ ಸರ್ಕಾರ ಮುಂದುವರಿದಿದ್ದರೆ ಇಂದು ನಿಮಗೆ ಈ ಸಮಸ್ಯೆ ಆಗುತ್ತಿರಲಿಲ್ಲ. ಸಮಸ್ಯೆ ಬಗೆಹರಿದು ಇವತ್ತಿಗೆ ಅಲ್ಲಿ ಟೌನ್‌ಶಿಪ್ ನಿರ್ಮಾಣವಾಗಿರುತಿತ್ತು ಎಂದ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆ ತರಬೇಡಿ. ಒಂದು ವೇಳೆ ಯಾರದ್ದೊ ಮಾತು ಕೇಳಿಕೊಂಡು ನೀವು ಮುಂದುವರಿದರೆ ಪರಿಣಾಮ ಸರಿ ಇರುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಿಮ್ಮ ಜತೆ ನಾನಿದ್ದೇನೆ
ಅಷ್ಟೂ ಭೂಮಿ ರೆಡ್ ಝೋನ್ ಆಗಿದ್ದು, ಯಾವ ರೈತರು ಜಮೀನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ನನಗೆ ಅರಿವಿದೆ. ಈ ವಿಚಾರದಲ್ಲಿ ನಾನು ನಿಮ್ಮ ಪರ ಇದ್ದೇನೆ. ಯಾವುದೇ ಹೋರಾಟಕ್ಕೆ ಸದಾ ಸಿದ್ಧನಿದ್ದೇನೆ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲ್ಲೆಬ್ಬಿಸಲು ಬಿಡುವುದಿಲ್ಲ. ಅನಿವಾರ್ಯ ಬಂದರೆ ನಾನೇ ಹೋರಾಟಕ್ಕೆ ಬರುತ್ತೇನೆ ಎಂದು ರೈತರಿಗೆ ಎಚ್‌ಡಿಕೆ ಧೈರ್ಯ ತುಂಬಿದರು.
50ಕ್ಕೂ ಹೆಚ್ಚು ರೈತರು ಕುಮಾರಸ್ವಾಮಿ ಅವರ ಭೇಟಿ ವೇಳೆ ಉಪಸ್ಥಿತರಿದ್ದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಮದ ಟೌನ್‌ಶಿಪ್ ನಿರ್ಮಾಣ ಮಾಡಿಸಲು ಸರ್ಕಾರ ಹೊರಟಿದೆ. ಇದರ ಭಾಗವಾಗಿ ಈಗಾಗಲೇ ಸಿಎಂ ಅವರಿಗೂ ಪತ್ರ ಬರೆಯಲಾಗಿದೆ. ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿ, ಸದ್ಯದ ಪರಿಸ್ಥಿತಿ ವಿವರಣೆ ಮಾಡಿಕೊಡಲಾಗಿದೆ. ಪ್ರಾಧಿಕಾರದಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಕಾರಣ ಪ್ರಾಧಿಕಾರದ ಬಳಿ ಅಷ್ಟು ಹಣ ಇಲ್ಲ.- ಎ.ಮಂಜುನಾಥ್, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net