

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯ ಅಫಜಲಪುರ ತಾಲೂಕಿನ ಪುಣ್ಯ ಕ್ಷೇತ್ರವಾಗಿರುವ ದೇವಲಗಾಣಗಾಪುರದ ಭೀಮಾ ನದಿಯಲ್ಲಿ ಪುಣ್ಯ ಸ್ನಾನಕ್ಕೆ ಇಳಿದ ವೇಳೆಯಲ್ಲಿ ಬಾಲಕರಿಬ್ಬರು ನೀರುಪಾಲಾಗಿದ್ದಾರೆ.
ಪ್ರಕಾಶ (೧೫) ಮತ್ತು ಸೋನು (೧೫) ಮೃತಪಟ್ಟಿರುವ ಬಾಲಕರು. ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಘಟನೆ ನೋಡಿದ ಜನರು ಮಮ್ಮಲು ಮರುಗಿದರು.
ದೇವಲಗಾಣಗಾಪುರದ ಸಂಗಮದಲ್ಲಿರುವ ಅಷ್ಟ ತೀರ್ಥದಲ್ಲಿ ಇಬ್ಬರು ಸ್ನಾನ ಮಾಡಲು ಹೋಗಿದ್ದರು. ಈ ವೇಳೆಯಲ್ಲಿ ಸೋನು ಆಯತಪ್ಪಿ ನೀರಿನಲ್ಲಿ ಬಿದ್ದ. ಆತನನ್ನು ರಕ್ಷಿಸಲು ಪ್ರಕಾಶ ಸಹ ಸೀರೆ ಹಿಡಿದುಕೊಂಡು ನೀರಿಗೆ ಇಳಿದ ಈ ವೇಳೆಯಲ್ಲಿ ಇಬ್ಬರು ನೀರಿನಲ್ಲಿ ಮುಳಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ತಂಡದ ಪೊಲೀಸರು ದೌಡಾಯಿಸಿ ಇಬ್ಬರಿಗಾಗಿ ಶೋಧ ನಡೆಸಿ ಹೊರ ತೆಗೆದರು. ದೇವಲಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.