

ಗೋಕರ್ಣ: ಗೊತ್ತಿಲ್ಲದ ಪ್ರದೇಶದಲ್ಲಿ ಟ್ರಕ್ಕಿಂಗ್ ಗೆ ತೆರಳಿದ ಪ್ರವಾಸಿಗರ ಗುಂಪು ದಾರಿ ತಪ್ಪಿದ ಘಟನೆ ಗೋಕರ್ಣ ಸಮೀಪ ಸೋಮವಾರ ನಡೆದಿದೆ. ತಂಡವನ್ನು 112 ಪೊಲೀಸ್ ಸಹಾಯವಾಣಿ ತಂಡವು ರಕ್ಷಿಸಿದೆ.
ಆಂಧ್ರ ಪ್ರದೇಶ ಗುಂಟೂರು ಮೂಲದ ಕೋಟಾಕಂ ಶಿವಕುಮಾರ ಹಾಗೂ ಇನ್ನೂ 11 ಜನರು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದು ಸೋಮವಾರ ಇಲ್ಲಿನ ಪ್ಯಾರಡೈಸ್ ಬೀಚ್‌ನ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ತೆರಳಿ ದಾರಿ ತಪ್ಪಿದ್ದರು.
ಕಾಡು, ಬಿರು ಬಿಸಿಲು, ಎಲ್ಲಿ ನೋಡಿದರೂ ಗುಡ್ಡ, ಇನ್ನೊಂದೆಡೆ ಸಮುದ್ರ ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾದರು. ನಂತರ ನಂತರ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರು.
ಪೊಲೀಸ್ ಸಿಬ್ಬಂದಿ ಮಹೇಶ ಗಣಪತಿ ನಾಯ್ಕ, ಚಂದ್ರಶೇಖರ ಕೆ.ನಾಯ್ಕ, ರವಿ ನಾಯ್ಕ ಅವರು ತಕ್ಷಣ ಬೇಲೆಕಾನ ತಲುಪಿ ಅಲ್ಲಿಂದ ಕಾಲುದಾರಿಯಲ್ಲಿ ನಡೆದು, ಪ್ರವಾಸಿಗರನ್ನು ಹುಡುಕಿದ್ದಾರೆ. ಟ್ರಕ್ಕಿಂಗ್ ಲೀಡರ್ ವಿ.ಕೈವಲ್ಯವಾಣಿ ಹಾಗೂ ಇತರ 11 ಜನರನ್ನು ಬೇಲೆಕಾನಿಗೆ ಕರೆತಂದಿದ್ದಾರೆ.