

ಯಾದಗಿರಿ: ಸೀಮಂತ ಕಾರ್ಯಕ್ರಮದಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಪ್ರಕರಣದಲ್ಲಿ ಸತ್ತವರ ಸಂಖ್ಯೆ ಈಗ 9ಕ್ಕೆ ಏರಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಫೆ. 25ರಂದು ಈ ಅವಘಡ ಸಂಭವಿಸಿತ್ತು.
ಅಂದು ಮಧ್ಯಾಹ್ನ ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್ಎಲ್) ನಿವೃತ್ತ ನೌಕರನ ಮನೆಯಲ್ಲಿ ಸೀಮಂತ ನಡೆಯುತ್ತಿದ್ದ ಸಂದರ್ಭದಲ್ಲಿ ಅಡುಗೆ ಅನಿಲ ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅದರಲ್ಲಿ 8 ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ (15 ತಿಂಗಳ ಮಗು), ಆದ್ಯಾ (3) ಹಾಗೂ ನಿಂಗಮ್ಮ (85) ಅದೇ ದಿನ ಮತ್ತು ಮರುದಿನ ಗಂಗಮ್ಮ (51) ಮೃತಪಟ್ಟಿದ್ದರು. ಉಳಿದ ಗಾಯಾಳುಗಳ ಚಿಕಿತ್ಸೆ ಮುಂದುವರಿದಿತ್ತು.
ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೂವರು ಸಾವಿಗೀಡಾಗಿದ್ದು, ಮತ್ತೊಂದೆಡೆ ಶಹಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದ ಚನ್ನವೀರ ಕೂಡ ಮೃತಪಟ್ಟಿದ್ದಾರೆ. ಭೀಮರಾಯ (78), ವೀರಬಸಪ್ಪ (28), ಕಲ್ಲಪ್ಪ (48), ಚನ್ನವೀರ (30) ಮತ್ತು ಇಂದು ಅವರ ಸಾವಿನೊಂದಿಗೆ ಸತ್ತವರ ಸಂಖ್ಯೆ 9ಕ್ಕೆ ಏರಿದ್ದು, ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.