

ಗಂಗೊಳ್ಳಿ: ಕುಂದಾಪುರ ತಾಲೂಕಾದ್ಯಂತ ಬಹುತೇಕ ಕಡೆ ಶುಕ್ರವಾರ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಮತ್ತೊಮ್ಮೆ ಜಲಾವೃತಗೊಂಡಿದೆ. ನಿರಂತರ ಗಾಳಿಮಳೆಯಿಂದ ನದಿ ಪಾತ್ರದ ಗ್ರಾಮಗಳಲ್ಲಿ ನೆರೆ ಕಾಣಿಸಿಕೊಂಡಿದೆ. ಸೌಪರ್ಣಿಕಾ, ವಾರಾಹಿ, ಕುಬ್ಜಾ ನದಿಗಳು ತುಂಬಿ ಹರಿಯುತ್ತಿದೆ. ಸೌಪರ್ಣಿಕಾ ನದಿ ಪಾತ್ರದ ಮರವಂತೆ, ನಾಡ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮದ ತಗ್ಗುಪ್ರದೇಶಗಳಲ್ಲಿ ನೆರೆ ಭೀತಿ ಆವರಿಸಿದೆ. ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದ್ದು, ಇತ್ತೀಚೆಗಷ್ಟೇ ನಾಟಿ ಮಾಡಿದ ಭತ್ತದ ಬೆಳೆ ನೀರಿನಲ್ಲಿ ಕೊಳೆಯುತ್ತಿದೆ. ಪಂಚಗಂಗಾವಳಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದ್ದು, ನದಿ ಉಕ್ಕಿ ಹರಿಯಲಾರಂಭಿಸಿದೆ. ಗಂಗೊಳ್ಳಿ, ಗುಜ್ಜಾಡಿ ಮತ್ತು ಹೊಸಾಡು ಗ್ರಾಮದ ಅನೇಕ ಕಡೆಗಳ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಆಸ್ತಿಪಾಸ್ತಿ ಹಾನಿಯಂಟು ಮಾಡಿದೆ.
ಮಳೆ ವ್ಯಾಪಕವಾಗುತ್ತಿರುವುದರಿಂದ ಕಡಲು ಮತ್ತಷ್ಟು ಪ್ರಕ್ಷುಬ್ಧಗೊಂಡಿದ್ದು, ಗಂಗೊಳ್ಳಿ, ಕಂಚುಗೋಡು, ತ್ರಾಸಿ, ಹೊಸಾಡು ಹಾಗೂ ಮರವಂತೆಯಲ್ಲಿ ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದೆ. ಕಡಲಿನ ಭಾರಿ ಅಲೆ ರಾಷ್ಟ್ರೀಯ ಹೆದ್ದಾರಿ 66ರ ತಡೆಗೋಡೆಗೆ ಅಪ್ಪಳಿಸುತ್ತಿದ್ದು, ಸಮುದ್ರ ನೀರು ರಾಷ್ಟ್ರೀಯ ಹೆದ್ದಾರಿಗೆ ಚಿಮ್ಮುತ್ತಿದೆ. ಕಡಲ ಅಲೆಗಳ ತೀವ್ರತೆಗೆ ಗಂಗೊಳ್ಳಿ ಖಾರ್ವಿಕೇರಿ ಪರಿಸರದಲ್ಲಿ ತಡೆಗೋಡೆ ಕುಸಿಯುತ್ತಿದ್ದು, ತಡೆಗೋಡೆ ಕಲ್ಲುಗಳು ಒಂದೊಂದಾಗಿ ಕಡಲ ಪಾಲಾಗುತ್ತಿದೆ. ಸಂಜೆ ಬಳಿಕ ಮಳೆ ತೀವ್ರತೆ ಕಡಿಮೆಯಾಗಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ.