ವಿಜಯವಾಣಿ ಸುದ್ದಿಜಾಲ ಮಂಗಳೂರು
ಪಶ್ಚಿಮಘಟ್ಟದ ಕೆಳಭಾಗದ ಪ್ರದೇಶಗಳಾದ ಚಾರ್ಮಾಡಿ, ಶಿರಾಡಿ, ಆಗುಂಬೆ ಸುತ್ತಮುತ್ತ ಮಂಜು ಕವಿದ ವಾತಾವರಣ, ಉತ್ತಮ ಮಳೆ ಆಗಿದ್ದು, ವಾಹನ ಸಂಚಾರಕ್ಕೆ ತುಸು ತೊಂದರೆಯಾಗಿತ್ತು. ಈ ಭಾಗದಲ್ಲಿ ಮುಂದಿನ 2-3 ದಿನ ಉತ್ತಮ ಮಳೆಯ ಮುನ್ಸೂಚನೆ ಇದ್ದು, ನದಿಮೂಲದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಶುಕ್ರವಾರ ಉಪ್ಪಿನಂಗಡಿ ನೇತ್ರಾವತಿ ನದಿ 24.5 ಮೀಟರ್ ಹಾಗೂ ತುಂಬೆ ನೇತ್ರಾವತಿ ನದಿ 3.4 ಮೀಟರ್‌ನಲ್ಲಿ ಹರಿಯುತ್ತಿದೆ. ಕರಾವಳಿಯಲ್ಲಿ ಕಳೆದ 3-4 ದಿನಗಳಿಂದ ಮುಂಗಾರು ಮಳೆಯಾಗುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಾಗರ ಭೂ ವಿಜ್ಞಾನ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳ ಕಾಲಾವಧಿಯಲ್ಲಿ ದ.ಕ ಜಿಲ್ಲೆಯಲ್ಲಿ ಮಳೆಯಿಂದಾಗಿ ಆಸ್ತಿಪಾಸ್ತಿ, ಪ್ರಾಣಹಾನಿ ಸಂಭವಿಸಿಲ್ಲ ಎಂದು ದ.ಕ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕನಿಷ್ಠ ಉಷ್ಣಾಂಶ
ದ.ಕ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 8 ಮಿ.ಮೀ. ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 6.8, ಬಂಟ್ವಾಳದಲ್ಲಿ 12.7, ಮಂಗಳೂರು 18.6, ಪುತ್ತೂರು 7.4, ಸುಳ್ಯದಲ್ಲಿ 3.5, ಮೂಡುಬಿದಿರೆಯಲ್ಲಿ 12.7, ಕಡಬ 2.8, ಮೂಲ್ಕಿ 5.9 ಹಾಗೂ ಉಳ್ಳಾಲದಲ್ಲಿ 13.9 ಮಿ.ಮೀ. ಮಳೆಯಾಗಿದೆ. ಶುಕ್ರವಾರ 29.6 ಡಿ.ಸೆ. ಗರಿಷ್ಠ, 22.9 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ.