

ಬೆಂಗಳೂರು: ಮುರ್ನಾಲ್ಕು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ,ರಾಜಧಾನಿಯ ಹಲವೆಡೆ ಗುರುವಾರ ಧಾರಾಕಾರವಾಗಿ ಸುರಿದಿದೆ. ದಕ್ಷಿಣ ವಲಯ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ, ಮಹದೇವಪುರ, ಆರ್.ಆರ್.ನಗರ, ಬೊಮ್ಮನಹಳ್ಳಿ ವಲಯದ ಕೆಲವೆಡೆ ಬಿರುಸಾಗಿ ಮಳೆಯಾಗಿದೆ.
ಬೆಳಗ್ಗೆಯಿಂದಲೇ ಬಿಸಿಲು ಜತೆಗೆ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ 2.30ಕ್ಕೆ ಶುರುವಾದ ಮಳೆ ಉತ್ತರಹಳ್ಳಿ, ಪಟ್ಟಾಭಿರಾಮನಗರ, ಗೊಟ್ಟಿಗೆರೆ, ಬಿಟಿಎಂ ಲೇಔಟ್, ಬೆಳಂದೂರು, ಎಚ್ಎಎಲ್ ವಿಮಾನ ನಿಲ್ದಾಣ, ಹೆಮ್ಮಿಗೇಪುರ, ಚಾಮರಾಜಪೇಟೆ, ವಿದ್ಯಾಪಿಠ, ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್, ಬಸವನಗುಡಿ, ಜೆ.ಪಿ.ನಗರ, ಜಯನಗರ, ಲಾಲ್ಬಾಗ್, ಕೋರಮಂಗಲ, ಮೈಸೂರು ರಸ್ತೆ ಹಾಗೂ ನಾಯಂಡಹಳ್ಳಿ ಸೇರಿ ನಗರದ ವಿವಿಧ ಭಾಗಗಳಲ್ಲಿಯೂ ಜೋರಾಗಿ ವರ್ಷಧಾರೆಯಾಯಿತು.ಕೆಲ ರಸ್ತೆಗಳ ಮೇಲೆ ನೀರು ನುಗ್ಗಿದ ಪರಿಣಾಮ ವಾಹನ ಸವಾರರ ಪರದಾಡಿದರು. ಮಳೆಯಿಂದಾಗಿ ಮೇಲ್ಸುತುವೆ ಸೇರಿ ಇತರ ಪ್ರಮುಖ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಮ್ಯಾನ್ಹೋಲ್ ಹುಕ್ಕಿ ಹರಿದ ಪರಿಣಾಮ ರಸ್ತೆಯ ಮೇಲೆ ಕೊಳಚೆ ನೀರು ಹರಿಯುವ ಹಾಗೂ ಕೆಲವರು ಮಳೆಯಲ್ಲಿಯೇ ನೆನೆದುಕೊಂಡು ಹೋಗುವ ದೃಶ್ಯ ಅಲ್ಲೆಲ್ಲಿ ಕಂಡುಬಂತು. ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿರುವ ಬಗ್ಗೆ ಸಾರ್ವಜನಿಕರು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರು.
2 ದಿನ ಸಾಧಾರಣ ಮಳೆ:
ನಗರದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 2 ದಿನ ಮುಂದುವರಿಯಲಿದೆ. ಕೆಲವೆಡೆ ಬಿರುಸಾಗಿ ಸುರಿದರೆ ಇನ್ನೂ ಕೆಲವೆಡೆ ಸಾಧಾರಣ ಪ್ರಮಾಣದಲ್ಲಿ ಗುಡುಗು ಮಿಂಚು, ಬಿರು ಗಾಳಿ ಸಹಿತ ಮಳೆಯಾಗಲಿದೆ. ಜೂ 16ರಿಂದ ನಗರದಲ್ಲಿ ಮಳೆ ಕ್ಷೀಣವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಮುಂದಿನ ಎರಡು ದಿನ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿ.ಸೆ ಮತ್ತು 21 ಡಿ.ಸೆ. ಇರಲಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಪ್ರದೇಶ ಮಿಮೀ
ಎಚ್.ಗೊಲ್ಲಹಳ್ಳಿ 37
ಹೆಮ್ಮಿಗೇಪುರ 30
ಕೆಂಗೇರಿ 23
ವಿದ್ಯಾಪಿಠ 22
ನಾಯಂಡಹಳ್ಳಿ 22
ರಾಜರಾಜೇಶ್ವರಿನಗರ 21
ಕೋರಮಂಗಲ 21
ಎಚ್ಎಸ್ಆರ್ ಲೇಔಟ್ 17
ಮಾರತ್ತಹಳ್ಳಿ 15