

ಹಿರೀಸಾವೆ: ಹೋಬಳಿಯಾದ್ಯಂತ ಭಾನುವಾರ ಸಂಜೆ ಸುಮಾರಿನಲ್ಲಿ ಪ್ರಾರಂಭಗೊಂಡ ಮಳೆ ಸತತ 3 ಗಂಟೆಗಳಿಗೂ ಹೆಚ್ಚು ಸಮಯ ಧಾರಾಕಾರವಾಗಿ ಸುರಿಯಿತು.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ 5 ಗಂಟೆ ಯಲ್ಲಿ ಪ್ರಾರಂಭಗೊಂಡ ಮಳೆ ರಾತ್ರಿ 8 ಗಂಟೆವರೆಗೂ ಎಡಬಿಡದಂತೆ ಸುರಿಯಿತು.
ಮಿಂಚು ಗುಡುಗಿನೊಂದಿಗೆ ಮಳೆ ಅಬ್ಬರಿಸಿದ್ದು ರಸ್ತೆ ಬದಿಯ ಚರಂಡಿಗಳು ತುಂಬಿ ಹರಿದವು. ತೋಟ ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿದ್ದು ಜಲಾವೃತಗೊಂಡವು. ಕೆಲವಿಡೆ ರಸ್ತೆ ಬದಿಯ ನೀರು ಕೃಷಿ ಜಮೀನುಗಳಿಗೆ ರಭಸವಾಗಿ ನುಗ್ಗಿದ ಪರಿಣಾಮ ಬದುಗಳು ಒಡೆದು ಹೋಗಿವೆ.
ದಿಡಗ, ನರಿಹಳ್ಳಿ, ಪುರ, ಮೆಳ್ಳಹಳ್ಳಿ, ಹೊನ್ನಶೆಟ್ಟಿಹಳ್ಳಿ ಸೇರಿದಂತೆ ಹಲವು ಕಡೆ ಹಳ್ಳ-ಕೊಳ್ಳಗಳಲ್ಲಿ ಕೆಲಕಾಲ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ದೃಶ್ಯ ಕಂಡುಬಂದಿತು. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಕಳೆದ ವರ್ಷ ವಾಡಿಕೆಯಂತೆ ಮಳೆಯಾಗದ ಪರಿಣಾಮ ವ್ಯಾಪ್ತಿಯ ಯಾವುದೇ ಕೆರೆ-ಕಟ್ಟೆಗಳಲ್ಲಿ ನೀರಿರಲಿಲ್ಲ. ಅಂತರ್ಜಲದ ಮಟ್ಟ ತೀವ್ರ ಪ್ರಮಾಣದಲ್ಲಿ ಕುಸಿದಿದ್ದರಿಂದ ಸಾವಿರಾರು ಕೊಳವೆ ಬಾವಿಗಳು ಬತ್ತಿ ಬರಿದಾಗಿದ್ದವು.
ಕೃಷಿ ಚಟುವಟಿಕೆಗೆ ಇರಲಿ ಜನ, ಜಾನುವಾರುಗಳ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಇದರಿಂದ ರೈತರು ಕಂಗಾಲಾಗಿದ್ದರು. ದಿಡಗ, ಜಿನ್ನೇನಹಳ್ಳಿ, ಬಾಳಗಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಇತ್ತು. ಸದ್ಯ ಮಳೆಯಾಗಿರುವುದರಿಂದ ಸಮಸ್ಯೆ ಬಗೆಹರಿದಂತಾಗಿದೆ.
ಸೋಮವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಹೋಬಳಿಯ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಆಗಾಗ್ಗೆ ಸೋನೆ ಮಳೆ ಸುರಿಯಿತು. ಇದರಿಂದ ಜಾನುವಾರುಗಳನ್ನು ಮೇಯಿಸಲು ಹಾಗೂ ಮೇವು ಒದಗಿಸಲು ರೈತರು ಪರದಾಡಬೇಕಾಯಿತು.
ಕಳೆದ ಐದಾರು ದಿನಗಳಿಂದ ಪ್ರತಿದಿನ ಮಳೆ ಸುರಿಯುತಿದ್ದು ಮುಂಗಾರು ಹಂಗಾಮು ಬೆಳೆಗಳನ್ನು ಬಿತ್ತನೆ ಮಾಡಲು ಬಿಡುವು ನೀಡುತ್ತಿಲ್ಲ. ಆದರೂ ಪರವಾಗಿಲ್ಲ ಸದ್ಯಕ್ಕೆ ಕೆರೆ-ಕಟ್ಟೆಗಳಿಗೆ ನೀರು ಹರಿದು ತುಂಬಿದರೆ ಸಾಕು ಎಂಬುದು ರೈತರ ಆಶಯವಾಗಿದೆ.