ರಾಜ್ಯಪಾಲರ ವಿರುದ್ಧ ಚನ್ನಪಟ್ಟಣದಲ್ಲಿ ಪಂಜಿನ ಮೆರವಣಿಗೆ

img_1886-1.jpg
Published on

ಚನ್ನಪಟ್ಟಣ: 

ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ, ಭಾನುವಾರ ಸಂಜೆ ನಗರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಬೃಹತ್ ‌ಪಂಚಿನ ಮೆರವಣಿಗೆ ನಡೆಸಿದರು.

ನಗರದ ನ್ಯಾಯಾಲಯದ ಮುಂಭಾಗ ಜಮಾವಣೆಗೊಂಡ ಅಹಿಂದ ಸಮುದಾಯ, ವಿವಿಧ ಸಂಘಟನೆಗಳು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಕೈಯಲ್ಲಿ ಪಂಜು ಹಿಡಿದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು. ದಾರಿಯುದ್ಧಕ್ಕೂ ರಾಜ್ಯಪಾಲರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.‌ಗಾಂಧಿ ಭವನದ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ರಾಜ್ಯಪಾಲರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಪಿತೂರಿ ಎಂದು ಆಕ್ರೋಶ!

ಭಾಗ್ಯಗಳ ಸರದಾರರಾದ ಸಿಎಂ ಸಿದ್ದರಾಮಯ್ಯನವರು ಈ ನಾಡು ಕಂಡ ಜನಪರ ನಾಯಕ. ಹಿಂದುಳಿದ ವರ್ಗದ ಹಿನ್ನೆಲೆಯಲ್ಲಿ ಬಂದ ಅವರ ರಾಜಕೀಯ ಜೀವನದಲ್ಲಿ ಸಣ್ಣ ಕಪ್ಪುಚುಕ್ಕಿ ಇಲ್ಲ‌. ಆದರೆ, ರಾಜಕೀಯ ಪಿತೂರಿ ನಡೆಸಿ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ. ಸಿಎಂ ವಿರುದ್ಧ ರಾಜ್ಯಪಾಲರು ಅಸಂವಿಧಾನತ್ಮಕ ನಡೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ಎನ್‌ಡಿಎ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಡವರ ಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಮಾಡಿರುವ ಹುನ್ನಾರವಾಗಿದೆ ಸಿದ್ದರಾಮಯ್ಯವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ. ರಾಜ್ಯಪಾಲರಿಗೆ ಆತ್ಮ ಗೌರವ ಇದ್ದರೆ ಕೂಡಲೇ ರಾಜ್ಯ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ತಾಲೂಕು ಕುರುಬ ಸಂಘದ ಅಧ್ಯಕ್ಷ ಯಲಿಯೂರು ನಾಗಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್. ಆರ್. ಪ್ರಮೋದ್, 
ಜಿಲ್ಲಾ ಕುರುಬರ ಸಂಘದ ಯುವ ಘಟಕದ ಅಧ್ಯಕ್ಷ ವಿವೇಕ್ ವೆಂಕಟೇಶ್, ದಲಿತ ಮುಖಂಡ ಜಯಕಾಂತ್ ಚಾಲುಕ್ಯ, ಕಾಂಗ್ರೆಸ್ ಒಬಿಸಿ ನಗರ ಅಧ್ಯಕ್ಷ ಮಂಗಳವಾರಪೇಟೆ ರಾಘವೇಂದ್ರ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶ್, ಮುಖಂಡರಾದ ಬೈರಾಪಟ್ಟಣ ಸಂತೋಷ್, ಸೋಗಾಲ ರಮೇಶ್ ಸೇರಿದಂತೆ‌ ನಗರಸಭಾ ಸದಸ್ಯರುಗಳು,ಕುರುಬ ಸಮುದಾಯದ ಮುಖಂಡರುಗಳು,ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net