

ರಾಮನಗರ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಆಶಯದಂತೆ ನಗರಸಭೆ ಮೂಲಕ ವಿವಿಧ ಸವಲತ್ತುಗಳನ್ನು ಹಿಂದುಳಿದ ವರ್ಗದ ಶ್ರಮಿಕ ವರ್ಗಕ್ಕೆ ವಿತರಿಸಲಾಗುತ್ತಿದೆ ಎಂದು ನಗರಸಭಾಧ್ಯಕ್ಷ ಕೆ. ಶೇಷಾದ್ರಿ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಸವಿತಾ ಸಮಾಜದ ವೃತ್ತಿನಿರತರಿಗೆ ಸೋಮವಾರ ಸಲೂನ್ ಟೂಲ್ ಕಿಟ್ ವಿತರಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಮತ್ತು ಶ್ರಮಿಕ ಸಮುದಾಯಗಳನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮೇಲತ್ತಬೇಕೆಂಬುದು 2025-26ನೇ ಸಾಲಿನ ಆಯವ್ಯಯದಲ್ಲಿ ನಿರ್ಧರಿಸಿ, ಸವಿತಾ ಸಮಾಜ, ಮಡಿವಾಳ ಸಮಾಜದ ವೃತ್ತಿ ನಿರತರರಿಗೆ ವೃತ್ತಿಗೆ ಅನುಗುಣವಾಗಿ ಟೂಲ್ ಕಿಟ್ ವಿತರಿಸಲು ಅನುದಾನವನ್ನು ಮೀಸಲಿಡಲಾಗಿದೆ ಎಂದರು.
ಇದರನ್ವಯ ಸವಿತಾ ಸಮಾಜದ 110 ವೃತ್ತಿನಿರತರಿಗೆ ಟೂಲ್ ಕಿಟ್ ವಿತರಿಸಲು ನಿರ್ಧರಿಸಲಾಗಿದೆ. ಈ ಪೈಕಿ ಈಗಾಗಲೇ 20 ಮಂದಿಗೆ ವಿತರಿಸಲಾಗಿತ್ತು. ಈಗ 40 ಮಂದಿಗೆ ವಿತರಿಸಲಾಗುತ್ತಿದೆ. ಉಳಿದವರಿಗೆ ಇನ್ನು ಕೆಲವೇ ದಿನಗಳಲ್ಲಿ ವಿತರಿಸಲಾಗುವುದು ಎಂದರು.
ಮಡಿವಾಳ ಸಮಾಜದ ವೃತ್ತಿನಿರತರರಿಗೆ ಅಗತ್ಯ ಪರಿಕರ, ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಗಾತ್ರದ ಛತ್ರಿ ನೀಡಲಾಗಿದೆ. ನಗರಸಭೆ ಆಯವ್ಯಯದಲ್ಲಿ ನಿರ್ಧರಿಸಿದಂತೆ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.