

ದೇವದುರ್ಗ: ಪಟ್ಟಣದ ಟಿಎಪಿಸಿಎಂಎಸ್ ಸಂಘದ ಮೂಲಕ ಸುಮಾರು 36ಟನ್ ರಸಗೊಬ್ಬರವನ್ನು ಸೋಮವಾರ ವಿತರಣೆ ಮಾಡಲಾಯಿತು. ರಸಗೊಬ್ಬರ ಪಡೆಯಲು ರೈತರು ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತಿದ್ದರು.
ಕೆಲ ದಿನಗಳ ಹಿಂದೆ ಸಹಕಾರ ಸಂಘದ ಮೂಲಕ 100ಟನ್ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರ ವಿತರಣೆ ಮಾಡಲಾಗಿತ್ತು. ಈ ಗೊಬ್ಬರ ರೈತರಿಗೆ ಸಾಲದಾಗಿತ್ತು. ಹಲವು ದಿನಗಳ ನಂತರ 36ಟನ್ ಯೂರಿಯಾ ಹಾಗೂ ಡಿಎಪಿ ಪೂರೈಕೆಯಾಗಿದ್ದು ಸಣ್ಣ, ಅತಿಸಣ್ಣ ರೈತರಿಗೆ ವಿತರಣೆ ಮಾಡಲಾಗಿದೆ. ಬಹುತೇಕ ರೈತರು ಯೂರಿಯಾ ಬೇಕೆಂದು ಕೇಳುತ್ತಿದ್ದು ಡಿಎಪಿ ಬಗ್ಗೆ ಅಷ್ಟಾಗಿ ಬೇಡಿಕೆ ಇರಲಿಲ್ಲ.
ಇದನ್ನೂ ಓದಿ: ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ: ಬಿಜೆಪಿ ಆರೋಪ
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ ಭೇಟಿನೀಡಿ, ನ್ಯಾನೋ ಯೂರಿಯಾ, ಡಿಎಪಿ ಪಡೆಯುವಂತೆ ರೈತರಿಗೆ ಮನವರಿಕೆ ಮಾಡಿದರು. ಕೆಲರೈತರು ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಪಡೆದು ಹೇಗೆ ಸಿಂಪಡಣೆ ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ಪಡೆದರು.
ಇದನ್ನೂ ಓದಿ: ನಂಜನಗೂಡಿನಲ್ಲಿ ರಸಗೊಬ್ಬರ ಅಕ್ರಮ ದಾಸ್ತಾನು
ಸದ್ಯ ಒಂದೆರಡು ಚೀಲ ನೀಡಲಾಗುತ್ತಿದ್ದು ಹೆಚ್ಚುವರಿ ಗೊಬ್ಬರ ಖಾಸಗಿಯಾಗಿ ದೊರೆಯಲಿದೆ. ಅದರ ಬದಲು ನ್ಯಾನೋ ರಸಗೊಬ್ಬರ ಪಡೆದು ಬೆಳೆಗಳಿಗೆ ಹಾಕುವಂತೆ ಅರಿವು ಮೂಡಿಸಿದರು.
ಇದನ್ನೂ ಓದಿ: ಯೂರಿಯಾ ಗೊಬ್ಬರ ಪೂರೈಕೆಗೆ ಆಗ್ರಹ
ಈ ವರ್ಷ ನಾರಾಯಣಪುರ ಬಲದಂಡೆ ನಾಲೆಗೆ ಜುಲೈ ಮೊದಲ ವಾರದ ನಂತರ ನೀರು ಹರಿಸಿದ್ದರಿಂದ ರಸಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಪ್ರತಿವರ್ಷ ಜುಲೈ ಕೊನೇವಾರದಲ್ಲಿ ನಾಲೆಗೆ ನೀರು ಹರಿಸಲಾಗುತ್ತಿತ್ತು. ಇದರಿಂದ ಆಗಸ್ಟ್ ಮಧ್ಯ ಭಾಗದಿಂದ ಗೊಬ್ಬರ ಬೇಡಿಕೆ ಇರುತ್ತಿತ್ತು.
ಇದನ್ನೂ ಓದಿ: ನಿಗದಿತ ಪ್ರಮಾಣದಲ್ಲೇ ಯೂರಿಯಾ ರಸಗೊಬ್ಬರ ಬಳಸಿ
ಆದರೆ, ಈ ಸಲ ಬೇಗ ನಾಟಿಯಾಗಿದ್ದರಿಂದ ಜುಲೈ ಅಂತ್ಯದಿಂದ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಯಾಗುತ್ತಿಲ್ಲ. ನ್ಯಾನೋ ಗೊಬ್ಬರ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ ತಿಳಿಸಿದ್ದಾರೆ.