

ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಹಾಗೂ ಹಾಸನಾಂಬೆ ದೇವಿಯ ಸಹೋದರಿ ಶ್ರೀ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ ನ.5 ಮತ್ತು 6 ರಂದು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಯಲಿದೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುವ ಮೂಲಕ ಜಾತ್ರೆಯ ಯಶಸ್ವಿಗೆ ಸಹಕರಿಸಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಡಿ. ಗೋಪಾಲ್ ತಿಳಿಸಿದ್ದಾರೆ.
ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ಬಾಗಿಲು ಹಾಕಿದ ನಂತರ ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ನೆಲೆಸಿರುವ ಶ್ರೀ ಕೆಂಚಾಂಬಿಕೆ ದೇವಿಯ ಜಾತ್ರಾ ಉತ್ಸವಗಳು ಪ್ರಾರಂಭಗೊಳ್ಳುತ್ತವೆ. ಸುತ್ತಮುತ್ತಲಿನ 48 ಹಳ್ಳಿಗಳಲ್ಲೂ ಸುಗ್ಗಿ ಜಾತ್ರೆಯನ್ನು ಆಚರಿಸಲಾಗುತ್ತದೆ. ರಾಜ್ಯ ಹೊರರಾಜ್ಯದಲ್ಲೂ ದೇವಿಯ ಭಕ್ತರಿದ್ದು, ಜಾತ್ರಾ ಸಂದರ್ಭದಲ್ಲಿ ಭಾಗವಹಿಸಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನವೆಂಬರ್ 5ರಂದು ಸಂಜೆ 7 ಗಂಟೆಗೆ ಸಪ್ತಮಾತೃಕಾ ಅಲಂಕಾರ, ಉದ್ವಾರ್ಚನೆ ಸುಗ್ಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ನವೆಂಬರ್ 6ರ ಬುಧವಾರ ಮುಂಜಾನೆ ದೇವಿಯ ಒಡವೆ ವಸ್ತ್ರಗಳನ್ನು ದೇಗುಲ ಆವರಣಕ್ಕೆ ಹೊತ್ತುಕೊಂಡು ಸಾಗುವ ಮೂಲಕ ಜಾತ್ರಾ ಉತ್ಸವಾದಿಗಳು ನಡೆಯುತ್ತವೆ. ಆ ಸಂದರ್ಭದಲ್ಲಿ ಪ್ರತಿ ಮನೆಯವರು ದೇವರಿಗೆ ಆರತಿಯನ್ನು ಬೆಳಗುವ ಮೂಲಕ ಈಡುಗಾಯಿಯನ್ನು ಒಡೆಯುತ್ತಾರೆ. 10.30 ಗಂಟೆಯೊಳಗೆ ಉತ್ಸವವು ಶ್ರೀ ಕೆಂಚಾಂಬ ದೇವಸ್ಥಾನದ ಜಾತ್ರಾ ಮೈದಾನಕ್ಕೆ ಆಗಮಿಸುತ್ತದೆ ದೇಗುಲದ ಪ್ರಧಾನ ಅರ್ಚಕ ರಾಮಸ್ವಾಮಿ ಅವರಿಂದ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಳ್ಳುತ್ತವೆ. ಮಧ್ಯಾನ 1 ಗಂಟೆಗೆ ಮಹಾಮಂಗಳಾರತಿ ನಡೆಯುತ್ತದೆ. ನಂತರ ನೆರೆದಿದ್ದ ಎಲ್ಲ ಭಕ್ತರಿಗೆ ದೇವಿಯ ದರ್ಶನ ಹಾಗೂ ಪಾದ ಮುಟ್ಟಿ ನಮಸ್ಕರಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಈ ವ್ಯವಸ್ಥೆ ದೊಡ್ಡ ಜಾತ್ರೆ ಮತ್ತು ಚಿಕ್ಕಜಾತ್ರೆಯಲ್ಲಿ ಮಾತ್ರ ಇರುತ್ತದೆ. ನಂತರ 2.30ಕ್ಕೆ ದೇವಸ್ಥಾನದ ಆವರಣದಲ್ಲಿ ಕೆಂಡ ಹಾಯುವ ಕಾರ್ಯಕ್ರಮ ನಡೆಸಲಾಗುವುದು. ಈ ಸಂದರ್ಭ ಕೆಂಡ ಹಾಯುವ ಮೂಲಕ ಹರಕೆ ತೀರಿಸುತ್ತಾರೆ. ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರಿಗೆ ಸಾರಿಗೆ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದರು.
ನವೆಂಬರ್ 7ರಿಂದ12ರ ವರೆಗೆ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲ, ನಂತರ ನವೆಂಬರ್ 13ರ ಬುಧವಾರ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಅಂದು ಬಾಗಿಲು ತೆರೆಯುವ ಜಾತ್ರೆಯನ್ನು ಆಚರಿಸಲಾಗುವುದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಕೆಂಚಾಂಬ ದೇವಸ್ಥಾನದ ವ್ಯವಸ್ಥಾಪನ ಆಡಳಿತ ಮಂಡಳಿಯ ಸದಸ್ಯ ನಾರಾಯಣ ಶರ್ಮ, ಸಿದ್ದಬಸವೇಗೌಡ, ದಾಸೋಹ ಸಮಿತಿಯ ಪ್ರಕಾಶ್, ಅರ್ಚಕ ಕುಟುಂಬದ ಸತ್ಯನಾರಾಯಣ್ ಇದ್ದರು.