

ಮೈಸೂರು: ರಾಜ್ಯಾದ್ಯಂತ ಆಯುಧಪೂಜೆಯ ಸಂಭ್ರಮ ಮನೆ ಮಾಡಿದೆ. ಮೈಸೂರು ಅರಮನೆಯಲ್ಲಿ ಬೆಳಗ್ಗೆ 5.30ಕ್ಕೆ ಚಂಡಿಹೋಮದೊಂದಿಗೆ ಪೂಜೆಗಳು ಆರಂಭಗೊಂಡಿವೆ. ಬೆಳಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟಣದ ಆನೆ, ಕುದುರೆ, ಪಟ್ಟದ ಹಸು ಆಗಮಿಸಲಿದೆ. ಮಧ್ಯಾಹ್ನ 12.20 ನಿಮಿಷದಿಂದ ಮಧ್ಯಾಹ್ನ 12.45 ನಿಮಿಷದವರೆಗೆ ಆಯುಧ ಪೂಜೆ ನಡೆಯಲಿದೆ. ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ ನೆರವೇರಿಸಲಿದ್ದಾರೆ.
ಯದುವೀರ ಅವರು ಅರಮನೆಯಲ್ಲಿನ ಆಯುಧಗಳಿಗೆ ಪೂಜೆ ನೆರವೇರಿಸಿ, ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ಮಧ್ಯೆ, ಮಂಗಳವಾರ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯಲಿದ್ದು, ಇದರೊಂದಿಗೆ ಕಳೆದ ಹತ್ತು ದಿನಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ನಾಡಹಬ್ಬಕ್ಕೆ ತೆರೆ ಬೀಳಲಿದೆ. ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು, ನಾಡದೇವತೆ ಚಾಮುಂಡೇಶ್ವರಿಗೆ ಭಕ್ತಿಭಾವದಿಂದ ನಮಿಸಲು ದೇಶ-ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಸಾಂಸ್ಕೃತಿಕ ನಗರಿಯತ್ತ ಧಾವಿಸಲಿದ್ದಾರೆ.
ವಿಜಯದಶಮಿ ಮೆರವಣಿಗೆ
ವಿಜಯದಶಮಿ ಮೆರವಣಿಗೆಯು ನಾಳೆ ಮಂಗಳವಾರ (ಅ.24) ನಡೆಯಲಿದ್ದು, ಅಂತಿಮ ಹಂತದ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುತ್ತಾ ‘ರಾಜಪಥ’ದಲ್ಲಿ ಸಾಗಲು ಕಲಾತಂಡಗಳು, ಸ್ತಬ್ಧಚಿತ್ರಗಳು ಸಜ್ಜಾಗಿವೆ. ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಉದ್ಘಾಟನೆ ನೆರವೇರಿಸಲಿರುವ ಸಿಎಂ
ಅರಮನೆಯ ಬಲರಾಮ ದ್ವಾರದಲ್ಲಿ ಮಂಗಳವಾರ ಮಧ್ಯಾಹ್ನ1.46ರಿಂದ 2.08ರೊಳಗೆ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ 4.40ರಿಂದ 5ರವರೆಗೆ ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೇಯರ್ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಜಂಬೂಸವಾರಿ ಉದ್ಘಾಟನೆಗೆ ಮುಖ್ಯಅತಿಥಿಯಾಗಿ ಆಹ್ವಾನಿಸುವುದನ್ನು ಈ ವರ್ಷವೂ ಮುಂದುವರಿಸಲಾಗಿದೆ.
ಇಂದು ಏರ್‌ಶೋ
ಇಂದು ಮೈಸೂರಿನಲ್ಲಿ ನಡೆಯಲಿರುವ ಏರ್‌ಶೋಗೆ ಸಿಎಂ ಸಾಕ್ಷಿಯಾಗಲಿದ್ದಾರೆ. ಭಾರತೀಯ ವಾಯುಪಡೆ ವತಿಯಿಂದ ಏರ್ ಶೋ ನಡೆಯುತ್ತಿದ್ದು, ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬನ್ನಿ ಮಂಟಪದಲ್ಲಿ ಯುದ್ಧ ವಿಮಾನಗಳು ಪ್ರದರ್ಶನ ನಡೆಯಲಿದೆ.