More

    ದಶೇಂದ್ರಿಯಗಳ ವಿಜಯವೇ ವಿಜಯದಶಮಿ

    ದಶೇಂದ್ರಿಯಗಳ ವಿಜಯವೇ ವಿಜಯದಶಮಿ

     ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು, ಶ್ರೀಶೈಲ ಜಗದ್ಗುರುಗಳು
    ಆಶ್ವಿಜ ಮಾಸದ ಶುಕ್ಲಪಕ್ಷದ ದಶಮಿ ತಿಥಿಯನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ದುರ್ಗಾದೇವಿಯು ಒಂಬತ್ತು ದಿನಗಳವರೆಗೆ ರಾಕ್ಷಸರೊಂದಿಗೆ ಯುದ್ಧ ಮಾಡಿ ಇದೇ ದಿನದಂದು ಪೂರ್ಣ ವಿಜಯ ಪಡೆದುಕೊಂಡ ಕಾರಣ ಈ ದಿನವನ್ನು ವಿಜಯ ದಶಮಿ ಎಂದು ಹೆಸರಿಸಲಾಗಿದೆ. ಅಂತೆಯೇ ಇದರ ಹಿಂದಿನ ಒಂಬತ್ತು ದಿನಗಳನ್ನು ನವರಾತ್ರಿ ಎಂದು ಹೆಸರಿಸಿ ಜಗನ್ಮಾತೆಯಾದ ದೇವಿಯ ಆರಾಧನೆಗೆ ಮೀಸಲಿರಿಸಲಾಗಿದೆ. ಹಿಂದೂಗಳಿಗೆ ಶಿವರಾತ್ರಿ ಮತ್ತು ನವರಾತ್ರಿ ಎರಡೂ ಪಮುಖ ಪರ್ವಗಳು. ಶಿವರಾತ್ರಿಯಂದು ಶಿವನ ಆರಾಧನೆ ನಡೆದರೆ, ನವರಾತ್ರಿಯಲ್ಲಿ ಶೈಲಪುತ್ರೀ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ಎಂಬ ನವದುರ್ಗೆಯರ ರೂಪದಲ್ಲಿ ಶಕ್ತಿಯ ಉಪಾಸನೆ ಜರುಗುತ್ತದೆ.

    ದುರ್ಗಾಸಪ್ತಶತೀ ಮತ್ತು ಚಿದಾನಂದಾವಧೂತರ ದೇವೀ ಪಾರಾಯಣದಲ್ಲಿ ದೇವಿಯು ಮಧು, ಕೈಟಭ, ಬಿಡಾಲ, ಮಹಿಷಾಸುರ, ಧೂಮ್ರಲೋಚನ, ಚಂಡ, ಮುಂಡ, ರಕ್ತಬೀಜಾಸುರ, ಶುಂಭ, ನಿಶುಂಭ ಮುಂತಾದ ರಾಕ್ಷಸರನ್ನು ಸಂಹರಿಸಿದ ಬಗ್ಗೆ ಉಲ್ಲೇಖ ದೊರೆಯುತ್ತದೆ. ದೇವಿಯು ಸಂಹರಿಸಿದ ಈ ರಾಕ್ಷಸರು ಯಾವುದೋ ಒಂದು ಕಾಲದಲ್ಲಿ ಇದ್ದು ಹೋಗಿರಬಹುದು, ಆದರೆ ಮನುಷ್ಯನ ವಿಕೃತ ಮನಸ್ಸಿನಲ್ಲಿ ಈಗಲೂ ವಾಸವಾಗಿದ್ದಾರೆ. ಅಂತೆಯೇ ಇದು ಕೇವಲ ದೇವಿ ಪುರಾಣವಲ್ಲ, ನಮ್ಮ ದೇಹದ ಪುರಾಣ. ಅಲ್ಲಿ ಬರುವ ರಾಕ್ಷಸರು ನಮ್ಮ ಮನಸ್ಸಿನಲ್ಲಿರುವ ದುರ್ಗಣಗಳ ಸಂಕೇತವಾದರೆ, ಅವರನ್ನು ಸಂಹರಿಸಿದ ದೇವಿಯು ಪೂರ್ಣಪ್ರಮಾಣದಲ್ಲಿ ಜಾಗೃತಗೊಂಡ ದಿವ್ಯಾತ್ಮದ ಪ್ರತೀಕವಾಗಿದ್ದಾಳೆ.

    ಮನುಷ್ಯನ ಪ್ರಾಪಂಚಿಕ ಬಂಧನಕ್ಕೆ ಕಾರಣವಾಗಿರುವ ರಾಗ-ದ್ವೇಷಗಳೇ ಮಧು ಕೈಟಭರು. ವಿಷ್ಣುವಿನ ಕಿವಿಗಳಿಂದ ಇವರೀರ್ವರೂ ಜನಿಸಿದರೆಂದು ಪುರಾಣಗಳಲ್ಲಿ ಪ್ರತಿಪಾದಿಸಲಾಗಿದೆ. ಮನಸ್ಸಿನಲ್ಲಿ ರಾಗದ್ವೇಷಗಳು ಸೃಷ್ಟಿಯಾಗುವುದು ಕೂಡ ಕಿವಿಯಿಂದಲೇನೇ. ನಮ್ಮ ವಿಶ್ವಾಸ ಯಾರ ಮೇಲಿರುತ್ತದೆಯೋ ಅವರು ಯಾರ ಬಗ್ಗೆ ಒಳ್ಳೆಯವರೆಂದು ಹೇಳುತ್ತಾರೆಯೋ ಅವರ ಬಗ್ಗೆ ನಮ್ಮ ಮನದಲ್ಲಿ ರಾಗ ರೂಪುಗೊಂಡರೆ, ಯಾರ ಬಗ್ಗೆ ಕೆಟ್ಟವರೆಂದು ಕಿವಿ ತುಂಬುತ್ತಾರೆಯೋ ಅವರ ಬಗ್ಗೆ ಮನದಲ್ಲಿ ದ್ವೇಷ ಜನಿಸುತ್ತದೆ.

    ಮನದ ಮದವೇ ಮಹಿಷಾಸುರ. ಮಾಯಾವಿ ಮಹಿಷಾಸುರನು ಹಲವಾರು ರೂಪಗಳನ್ನು ತಳೆದು ದೇವಿಯೊಂದಿಗೆ ಯುದ್ಧ ಮಾಡಿದ್ದು ಪುರಾಣದಲ್ಲಿ ಉಲ್ಲೇಖವಿದೆ. ಅಹಂಕಾರಕ್ಕೂ ನೂರೆಂಟು ರೂಪಗಳು. ವಿದ್ಯಾಮದ, ಧನಮದ, ಯೌವನ ಮದ, ರೂಪ ಮದ ಮುಂತಾಗಿ ಶಾಸ್ತ್ರದಲ್ಲಿ ಎಂಟು ವಿಭಾಗಗಳನ್ನು ಮಾಡಲಾಗಿದೆ. ಇದು ಕೆಟ್ಟದರ ಮೇಲೆ ಮಾತ್ರ ಸವಾರಿ ಮಾಡುವುದಿಲ್ಲ, ಬದಲಾಗಿ ಒಳ್ಳೆಯದರ ಮೇಲೂ ಸವಾರಿ ಮಾಡಿ ನಮ್ಮನ್ನು ಸರ್ವನಾಶ ಮಾಡುತ್ತದೆ. ಹಿಂಸೆ, ಮೋಸ, ವಂಚನೆ ಮುಂತಾದವುಗಳ ಮೂಲಕ ಬರುವಂತೆ, ಶಿವಪೂಜೆ, ಜಪ, ತಪ, ಸತ್ಯ, ದಾನ, ತ್ಯಾಗ, ಉಪಕಾರ, ಇವುಗಳ ಮೂಲಕ ಕೂಡ ಅಹಂಕಾರ ಮನದೊಳಗೆ ನುಗ್ಗಿ ನಮ್ಮ ಸಾಧನೆಯನ್ನು ಹಾಳು ಮಾಡುತ್ತದೆ. ಅಹಂಕಾರ ಶಬ್ದದ ಅರ್ಥ ವಿಶ್ಲೇಷಣೆಯನ್ನು ಸಂಸ್ಕೃತದಲ್ಲಿ ಚ್ವುಹಿ ಸಮಾಸದ ಮೂಲಕ ಮಾಡಲಾಗಿದೆ. ಅದಕ್ಕನುಗುಣವಾಗಿ ‘ನ ಅಹಂ, ಅನಹಂ. ಅನಹಮೇವ ಅಹಂಕರೋತೀತಿ ಅಹಂಕಾರಃ ’ ತಾನಲ್ಲದ ದೇಹಾದಿಗಳನ್ನೇ ತಾನೆಂದು ಅಭಿಮಾನ ಪಡುವುದನ್ನು ಅಹಂಕಾರವೆಂದು ಕರೆಯಲಾಗುತ್ತದೆ. ಮನುಷ್ಯನ ಎಲ್ಲ ದುಃಖಗಳಿಗೆ ಈ ಅಹಂಕಾರವೇ ಕಾರಣ. ಇದನ್ನು ಅತ್ಮಾನಾತ್ಮ ವಿವೇಕವೆಂಬ ಅಸ್ತ್ರದಿಂದ ಪರಾಭವಗೊಳಿಸಬೇಕು.

    ಚಂಡ-ಮುಂಡರು ಮನದೊಳಗಿನ ಲೋಭ-ಮೋಹಗಳ ಸಂಕೇತ. ತನ್ನ ಬಳಿ ಇಲ್ಲದೇ ಇರುವ ವಸ್ತುವನ್ನು ಶತಾಯಗತಾಯ ಪಡೆದುಕೊಳ್ಳಬೇಕೆಂಬ ಆಸೆಯೇ ಲೋಭ. ಪಡೆದುಕೊಂಡಿರುವ ವಸ್ತು ಅಥವಾ ವ್ಯಕ್ತಿಗಳು ನಮ್ಮಿಂದ ಎಂದೂ ದೂರವಾಗಬಾರದೆಂಬ ಭಾವವೇ ಮೋಹ. ಇವೆರಡೂ ಮನಸ್ಸಿನ ಹಲವಾರು ದುಃಖಗಳಿಗೆ ಕಾರಣವಾಗಿರುವುದರಿಂದ ದೇವಿಯು ಯುದ್ಧದಲ್ಲಿ ಚಂಡಮುಂಡರ ರುಂಡಗಳನ್ನು ಸಂಹರಿಸಿ ಚಂಡಿ, ಚಾಮುಂಡಿ ಎನಿಸಿಕೊಂಡಂತೆ ನಾವು ಕೂಡ ಅಲೌಕಿ ಸಾಧನೆಯ ಯುದ್ಧದಲ್ಲಿ ಲೋಭ, ಮೋಹಗಳನ್ನು ನಿರ್ಲಿಪ್ತಭಾವವೆಂಬ ಅಸ್ತ್ರದಿಂದ ಸದೆಬಡಿದು ಸದಾಶಿವನಾಗಲು ಶ್ರಮಿಸಬೇಕು.

    ರಕ್ತ ಬೀಜಾಸುರನ ಒಂದು ಹನಿ ರಕ್ತ ಭೂಮಿಗೆ ಬೀಳುತ್ತಿದ್ದಂತೆ ಅವನಂತಹ ಅನೇಕ ರಾಕ್ಷಸರು ಹುಟ್ಟಿಕೊಳ್ಳುತ್ತಿದ್ದರು. ದೇವಿಯಿಂದ ಅವತರಿಸಿದ ಎಲ್ಲ ಶಕ್ತಿಯರು ಕೂಡಿ ಉಪಾಯದಿಂದ ಇವನನ್ನು ಸಂಹರಿಸುತ್ತಾರೆ. ಈ ರಕ್ತಬೀಜಾಸುರನು ನಮ್ಮ ಮನಸ್ಸಿನಲ್ಲಿ ಒಂದಾದ ಮೇಲೊಂದರಂತೆ ಮೇಲೇಳುವ ವಾಸನೆಗಳ ಸಂಕೇತ. ಮನಸ್ಸಿನ ಒಂದು ವಾಸನೆಯನ್ನು ನಿಯಂತ್ರಿಸುವುದರೊಳಗೆ ನೂರು ವಾಸನೆಗಳು ಹುಟ್ಟಿ

    ಕೊಳ್ಳುತ್ತವೆ. ನಮ್ಮ ಸಾಧನೆಯ ಎಲ್ಲ ಶಕ್ತಿಯನ್ನು ಒಂದುಗೂಡಿಸಿ ಈ ವಾಸನೆ ಗಳೊಂದಿಗೆ ಹೋರಾಡಿದಾಗ ಮಾತ್ರ ಇವುಗಳ ಮೇಲೆ ವಿಜಯ ಸಾಧಿಸಲು ಸಾಧ್ಯ.

    ಶುಂಭ ನಿಶುಂಭರು ಕಾಮ ಮತ್ತು ಕ್ರೋಧಗಳ ಸಂಕೇತ. ದೇವಿಯ ಸ್ಪುರದ್ರೂಪಕ್ಕೆ ಮರುಳಾಗಿ ಜಗನ್ಮಾತೆಯನ್ನೆ ಮದುವೆಯಾಗಲು ಬಯಸಿ, ಪ್ರಯತ್ನಿಸಿ, ಕೊನೆಗೆ ಅವಳಿಂದ ಮರಣವನ್ನು ಹೊಂದುತ್ತಾರೆ. ಕಾಮವು ನಮ್ಮ ಹಿತಶತ್ರುವಾಗಿರುತ್ತದೆ. ಸುಖದ ಮುಖವಾಡ ಹಾಕಿಕೊಂಡು ಕೊನೆಗೆ ದುಃಖವನ್ನೇ ಕೊಡುತ್ತದೆ. ಆದ್ದರಿಂದ ಈ ಕಾಮ, ಕ್ರೋಧವೆಂಬ ಶುಂಭ ನಿಶುಂಭರನ್ನು ವೈರಾಗ್ಯವೆಂಬ ಖಡ್ಗದಿಂದ ಸಂಹರಿಸಬೇಕು.

    ದೇವರು ನಮಗೆ ಪಂಚಕಮೇಂದ್ರಿಯ ಮತ್ತು ಪಂಚಜ್ಞಾನೇಂದ್ರಿಯಗಳನ್ನು ಕೊಟ್ಟಿದ್ದಾನೆ. ಆದರೆ ಮನುಷ್ಯನು ಸ್ವಭಾವತಃ ಬಹಿಮುಖವಾದ ಇಂದ್ರಿಯಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳದೇ ತಾನೇ ಅವುಗಳ ಗುಲಾಮನಾಗಿ ಅಧಃಪತನ ಹೊಂದುತ್ತಾನೆ.

    ಅನಿಮಿತ್ತವರಿಗಳೆನಿಪ ಕಾಮಾದಿಗಳಿಗೆ| ತನುವನೇಕವನಿತ್ತೆ ಭವಭವಂಗಳಲಿ ಎಂಬ ನಿಜಗುಣ ಶಿವಯೋಗಿಗಳ ಉಕ್ತಿಯಂತೆ ಇಂದ್ರಿಯಗಳ ಚಪಲತೆಗೆ ಮಾರುಹೋಗಿ ಕಾಮ, ಕ್ರೋಧ ಮೊದಲಾದ ಅರಿಷಡ್ ವೈರಿಗಳಿಗೆ ಅನೇಕ ಜನ್ಮಗಳನ್ನೇ ಬಲಿ ಕೊಟ್ಟಿದ್ದಾನೆ.

    ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ |
    ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ ಜಾಗ್ರತ ||

    ಕಾಮ, ಕ್ರೋಧ, ಲೋಭ, ಮೋಹ ಮೊದಲಾದ ಕಳ್ಳರು ನಮ್ಮಲ್ಲಿರುವ ಜ್ಞಾನವೆಂಬ ರತ್ನವನ್ನು ಅಪಹರಿಸಲು ಹೊಂಚು ಹಾಕಿ ಕಾದು ಕುಳಿತಿದ್ದಾರೆ. ಆದ್ದರಿಂದ ಎಚ್ಚರನಾಗು ಎಚ್ಚರನಾಗು ಎಚ್ಚರನಾಗು ಎಂದು ಹೇಳಿದ್ದಾರೆ.

    ಇಂದ್ರನನ್ನು ಗೆಲ್ಲುವುದಕ್ಕಿಂತ ಇಂದ್ರಿಯಗಳನ್ನು ಗೆಲ್ಲುವುದು ಕಷ್ಟಸಾಧ್ಯ. ಅಂತೆಯೇ ಮಹಾಕವಿ ಕುವೆಂಪು ‘ಇಂದ್ರವಿಜಯಿಗಿಂ ಇಂದ್ರಿಯ ವಿಜಯಿ ಮೇಲು’ ಎಂದಿದ್ದಾರೆ. ಆದರೆ ಈ ಇಂದ್ರಿಯಗಳಿಂದ ದೊರೆಯುವ ಸುಖವು ಭ್ರಮಾತ್ಮಕ ಮತ್ತು ಕ್ಷಣಿಕವೆಂಬ ಜ್ಞಾನ ಹೊಂದಿ ನಿರಂತರ ಅಭ್ಯಾಸ, ವೈರಾಗ್ಯಗಳನ್ನು ಅಳವಡಿಸಿಕೊಂಡಾಗ ಈ ಇಂದ್ರಿಯಗಳ ಮೇಲೆ ಹತೋಟಿ ಸಾಧಿಸಬಹುದು. ಅಂತೆಯೇ ವಿಜಯದಶಮಿಯ ಮೊದಲು ನವರಾತ್ರಿಯಲ್ಲಿ ಉಪವಾಸ, ಜಾಗರಣೆ, ಪೂಜೆ ಮುಂತಾದ ವ್ರತಗಳನ್ನು ಆಚರಿಸುವ ಪದ್ಧತಿಯುಂಟು. ಗುರುಗಳ ಮಾರ್ಗದರ್ಶನ ಮತ್ತು ದೇವರ ಅನುಗ್ರಹದ ಮೂಲಕ ಜ್ಞಾನ, ವೈರಾಗ್ಯ ಮತ್ತು ನಿರಂತರ ಅಭ್ಯಾಸಗಳಿಂದ ದಶೇಂದ್ರಿಯಗಳ ಮೇಲೆ ವಿಜಯ ಸಾಧಿಸುವುದೇ ಅಂತರಂಗದ ವಿಜಯದಶಮಿ.

    ದ್ವವಿಮೌ ಪುರಷೌ ಲೋಕೇ ಸೂರ್ಯಮಂಡಲಭೇದಿನೌ|
    ಪರಿವ್ರಾಡ್ ಯೋಗಯುಕ್ತಶ್ಚ ರಣೇ ಚಾಭಿಮುಖೋ ಹತಃ ||

    ಇದು ಯಾಜ್ಞವಲ್ಕ್ಯ ಸ್ಮ ೃಯ ಉಕ್ತಿ. ಈ ಪ್ರಪಂಚದಲ್ಲಿ ಧರ್ಮದ ಪ್ರಮುಖ ಮಾರ್ಗವಾದ ಯೋಗಸಾಧನೆಯಲ್ಲಿ ಮುಂದವರಿದ ವ್ಯಕ್ತಿ ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವ್ಯಕ್ತಿ ಇವರೀರ್ವರೂ ತಮ್ಮ ಸಾಧನೆ ಮತ್ತು ಕೀರ್ತಿಗಳಿಂದ ಈ ಸೌರಮಂಡಲವನ್ನೇ ಮೀರಿ ಮೇಲೆ ಹೋಗುವರು ಎಂಬುದು ಇದರರ್ಥ. ಆದ್ದರಿಂದ ಹೊರಗೆ ದೇಶಕ್ಕಾಗಿ ವೈರಿಗಳೊಂದಿಗೆ ಮತ್ತು ಒಳಗೆ ಆತ್ಮೋನ್ನತಿಯ ಉದ್ದೇಶಕ್ಕಾಗಿ ಕಾಮ, ಕ್ರೋಧಾದಿ ಅಂತರಂಗದ ಶತ್ರುಗಳೊಡನೆ ಹೋರಾಡುವವನು ವಿಜಯದಶಮಿಯ ನಿಜವಾದ ಉದ್ದೇಶವನ್ನು ಸಾಧ್ಯವಾಗಿಸಿಕೊಳ್ಳುವನು.

    ಹೃದಯ ಆರೋಗ್ಯದಿಂದಿರಬೇಕಾದರೆ ಪ್ರತಿದಿನ ಈ ಹಣ್ಣುಗಳು, ತರಕಾರಿಗಳನ್ನು ಸೇವಿಸಿ…

    ಅತಿಯಾದ ಟೊಮ್ಯಾಟೊ ಬಳಕೆಯಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts