

ವಿಜಯಪುರ: ಉಪ ಚುನಾವಣೆ ಹಿನ್ನೆಲೆಯಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಯರ ಪ್ರಚಾರ ದುಂದುಭಿ ಮೊಳಗಲಿದ್ದು, ದಿಗ್ಗಜರು ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ. ನಾಳೆ ಮೂರೂ ಪಕ್ಷಗಳಿಂದ ಘಟಾನುಘಟಿಗಳೇ ಕಣದಲ್ಲಿರುವ ತಮ್ಮ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲಿದ್ದು, ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಯವರು ಆಕರ್ಷಣೆಯ ಕೇಂದ್ರವಾಗಿ ಇರಲಿದ್ದಾರೆ.
ಆಡಳಿತಾರೂಢ ಬಿಜೆಪಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಮಾತ್ರವಲ್ಲದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ಸಿಂದಗಿಗೆ ಭೇಟಿ ನೀಡಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಸಾಥ್ ನೀಡಲಿರುವುದರಿಂದ ಕಾಂಗ್ರೆಸ್ ಸಹ ಪ್ರಚಾರದಲ್ಲಿ ತನ್ನ ಕೈಮೇಲಾಗಿಸುವ ಪ್ರಯತ್ನ ನಡೆಸಲಿದೆ.
ಬಿಜೆಪಿ ಅಭ್ಯರ್ಥಿ ಪರ ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರದ ಹಲವೆಡೆ ಮತ ಯಾಚಿಸಲಿದ್ದು, ಸಂಜೆ 5 ಗಂಟೆಗೆ ಆಲಮೇಲ ಪಟ್ಟಣದ ಎ.ಕೆ.ನಂದಿ ಪ್ರೌಢ ಶಾಲಾ ಆವರಣದಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲೂ ಭಾಗವಹಿಸಲಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಬೆಳಗ್ಗೆ 11 ಗಂಟೆಗೆ ಬಳಗಾನೂರದಲ್ಲಿ ಕಾರ್ಯಕರ್ತರ ಸಭೆ, ಮಧ್ಯಾಹ್ನ 2ಕ್ಕೆ ಚಾಂದಕವಟೆಯಲ್ಲಿ ಪ್ರಚಾರ ಸಭೆ, ಸಂಜೆ 5 ಗಂಟೆಕ್ಕೆ ತಾಂಬಾದಲ್ಲಿ ಕಾರ್ಯಕರ್ತರ ಸಭೆ ಮತ್ತು ಸಂಜೆ 6-30ಕ್ಕೆ ಸಿಂದಗಿ ಪಟ್ಟಣದಲ್ಲಿ ಗಂಗಾಮತಸ್ಥರು, ಮುಸ್ಲಿಂ, ಹಾಲುಮತ, ಬಂಜಾರ, ಎಸ್ಸಿ-ಎಸ್ಟಿ ಮುಖಂಡರ ಜೊತೆ ಸಭೆ ನಡೆಸಿ, ರಾತ್ರಿ ವಿಜಯಪುರದಲ್ಲಿ ತಂಗಲಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೆಳಗ್ಗೆ 11 ಗಂಟೆಗೆ ಬೊಮ್ಮನಹಳ್ಳಿ, ಸಂಜೆ 4ಕ್ಕೆ ಗೋಲಗೇರಿ ಗ್ರಾಮ, 5.30ಕ್ಕೆ ಮಾಡಬಾಳ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಬೆಳಗ್ಗೆ 11.30ಕ್ಕೆ ಸಿಂದಗಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ಮಧ್ಯಾಹ್ನ 3ರಿಂದ 4 ಗಂಟೆ ವರೆಗೆ ಪಕ್ಷದ ಹಿರಿಯ ಮುಖಂಡರ ಜತೆ ಸಭೆ ನಡೆಸಿ ಬಳಿಕ ಹುಬ್ಬಳ್ಳಿಗೆ ತೆರಳಲಿದ್ದಾರೆ.