ಬಾದಾಮಿಯಲ್ಲೊಬ್ಬ ಟೊಮ್ಯಾಟೋ ಶಿವಪ್ಪ !!

BKT-15-11
Published on

ಬಾಗಲಕೋಟೆ: ಡೀಸೆಲ್, ಪೆಟ್ರೋಲ್ ಬೆಲೆಯನ್ನು ಮೀರಿ ಹೊರಟಿರುವ ಟೊಮ್ಯಾಟೋ ಇದೀಗ ಬೆಳೆಗಾರರ ಪಾಲಿಗೆ ಚಿನ್ನದ ಮೊಟ್ಟೆ ಆಗಿದ್ದರೆ ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಹಾಕುತ್ತಿರುವುದು ಸುಳ್ಳಲ್ಲ. ಭಾರಿ ಬೆಲೆಯೇನೋ ಇದೆ, ಆದರೆ, ರೈತರ ಬಳಿ ಬೆಳೆಯೇ ಇಲ್ಲವಾಗಿದೆ. ಈ ನಡುವೆ ಟೊಮ್ಯಾಟೋ ಶಿವಪ್ಪ ಎಂದೇ ಕರೆಯಲ್ಪಡುವ ಬಾದಾಮಿಯ ಶಿವಪ್ಪ ಕುರಿ ಎನ್ನುವ ರೈತ ೬ ಎಕರೆ ಟೊಮ್ಯಾಟೋ ಬೆಳೆದಿದ್ದು, ಲಕ್ಷ ಲಕ್ಷ ಹಣ ಎಣೆಸುತ್ತಿದ್ದಾರೆ.

ಅಂದ್ಹಾಗೆ ಈ ರೈತ ಶಿವಪ್ಪ ಟೊಮ್ಯಾಟೋ ಬೆಳೆಯುತ್ತಿರುವುದು ಇದು ಮೊದಲ ಸಲವೇನು ಅಲ್ಲ. ಬಾದಾಮಿ ಪಟ್ಟಣದಲ್ಲಿ ೨೫ ವರ್ಷಗಳಿಂದ ಟೊಮ್ಯಾಟೋ ಬೆಳೆಯುತ್ತ ಬಂದಿದ್ದು, ಟೊಮ್ಯಾಟೋ ಎಂದೂ ಇವರನ್ನು ಕೈಬಿಟ್ಟಿಲ್ಲ ಎನ್ನುವುದು ಅಚ್ಚರಿ ಎನ್ನಿಸಿದರೂ ಅದುವೆ ಸತ್ಯ!

ಕಳೆದ ವರ್ಷ ಭರ್ತಿ ೧೮ ಎಕರೆ ಟೊಮ್ಯಾಟೋ ಬೆಳೆದಿದ್ದ ಶಿವಪ್ಪ ಕುರಿ ಅವರಿಗೆ ಉತ್ತಮ ಬೆಲೆಯೂ ಸಿಕ್ಕಿತ್ತು. ಇದರಿಂದ ಬಂದಿದ್ದು ಬರೊಬ್ಬರಿ ೧.೧೦ ಕೋಟಿ ರೂಪಾಯಿ. ಶಿವಪ್ಪ ಅವರು ಕೋಲು ಹಾಕಿ, ತಂತಿ, ಸೆಣಬು ಕಟ್ಟಿ ಬೆಳೆಯುವುದರಿಂದ ಖರ್ಚು ಸಹ ಅಽಕ ಮಾಡುತ್ತಾರೆ. ಹೀಗಾಗಿ ಕಳೆದ ವರ್ಷ ೩೦ ಲಕ್ಷ ಖರ್ಚು ತೆಗೆದು ಲಾಭ ಆಗಿದ್ದು ೮೦ ಲಕ್ಷ ಅಂತಾರೆ ರೈತ ಶಿವಪ್ಪ.
ಈ ವರ್ಷ ಏನಾಗಿದೆ…?

ಈ ವರ್ಷ ಸಹ ಶಿವಪ್ಪ ಅವರು ೧೧ ಎಕರೆ ಟೊಮ್ಯಾಟೋ ಬೆಳೆದಿದ್ದು, ಎಕರೆಗೆ ಒಂದು ಲಕ್ಷದಂತೆ ೧೧ ಲಕ್ಷ ರೂ. ಖರ್ಚು ಮಾಡಿದ್ದಾರೆ. ಮೊದಲು ಬೆಳೆದಿದ್ದ ೫ ಎಕರೆಗೆ ಕನಿಷ್ಠ ಬೆಲೆ ಸಿಕ್ಕಿದ್ದರಿಂದ ಮಾಡಿದ ಖರ್ಚು ಮಾತ್ರ ಹಿಂತಿರುಗಿದ್ದು, ಲಾಭ ಆಗಿರಲಿಲ್ಲ. ಇದೀಗ ಕಟಾವು ಆಗುತ್ತಿರುವ ೬ ಎಕರೆ ಟೊಮ್ಯಾಟೋಗೆ ಚಿನ್ನದ ಬೆಲೆ ಸಿಗುತ್ತಿದ್ದು, ೮-೧೦ ಲಕ್ಷ ಲಾಭ ತಂದುಕೊಟ್ಟಿದೆ. ಇನ್ನು ಒಂದುವರೆ ತಿಂಗಳು ಕಟಾವು ಆಗಲಿದ್ದು, ಇದೇ ಬೆಲೆ ಸಿಕ್ಕರೆ ಇನ್ನೂ ೨೦ ರಿಂದ ೨೫ ಲಕ್ಷ ಲಾಭ ಆಗಲಿದೆ ಎನ್ನುತ್ತಾರೆ.

ಶಿವಪ್ಪನ ಸಾಧನೆ ಯಾರಿಗೂ ಕಡಿಮೆ ಇಲ್ಲ :
ಶಿವಪ್ಪ ಕುರಿ ಅವರು ಮೂಲತಃ ಕುಷ್ಟಗಿ ತಾಲೂಕಿನ ನಿಲುಗಲ್ಲ ಗ್ರಾಮದವರು. ಹಿರಿಕರದ್ದು ಅಂತ ಇದ್ದಿದ್ದು ಬರೀ ಎರಡು ಎಕರೆ ಜಮೀನು. ಹೀಗಾಗಿ ೨೫ ವರ್ಷಗಳ ಹಿಂದೆ ಬಾದಾಮಿಗೆ ಕುಟುಂಬ ಸಮೇತ ಆಗಮಿಸಿದ ಶಿವಪ್ಪ ಅವರು ಲೀಜ್ ಮೇಲೆ ಜಮೀನು ಪಡೆದು ಕೃಷಿ ಆರಂಭಿಸುತ್ತಾರೆ. ಈ ಮೊದಲು ಟೊಮ್ಯಾಟೋ ಬೆಳೆಯುತ್ತಿದ್ದ ಅವರು ಲೀಜ್ ಪಡೆದ ಜಮೀನುಗಳಲ್ಲೂ ಟೊಮ್ಯಾಟೋ ಬೆಳೆಯುವುದನ್ನು ಮುಂದುವರೆಸಿದೆ. ಬೆಳೆ ಕೈಹಿಡಿದು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಲಾಭ ಪಡೆದುಕೊಂಡರು. ಊರಲ್ಲಿ ಇದ್ದ ೨ ಎಕರೆ ಜಮೀನು ಮಾರಾಟ ಮಾಡಿ ಹಾಗೂ ಇಲ್ಲಿ ಕೃಷಿಯಿಂದ ಬಂದ ಆದಾಯದಲ್ಲಿ ಸ್ವಂತಕ್ಕೆಂದು ೫ ಎಕರೆ ಜಮೀನು ಹಿಡಿದರು. ಹೀಗೆ ವರ್ಷ ವರ್ಷ ಆದಾಯ ಹೆಚ್ಚಿ ಸದ್ಯ ಬಾದಾಮಿಯಲ್ಲಿ ೧೨ ಎಕರೆ ಹಾಗೂ ಕೊಪ್ಪಳ ಜಿಲ್ಲೆಯ ತಳಕಲ್ಲನಲ್ಲಿ ೬ ಎಕರೆ ಸ್ವಂತ ಜಮೀನು ಹೊಂದಿದ್ದಾರೆ.
ಬಾದಾಮಿ ಪಟ್ಟಣದಲ್ಲಿ ತಮ್ಮ ಸ್ವಂತ ೧೨ ಎಕರೆ ಜೊತೆಗೆ ೪೦ ಎಕರೆ ಲೀಜ್ ಪಡೆದು ಒಟ್ಟು ೫೨ ಎಕರೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ೩೦ ಎಕರೆಯಷ್ಟು ದಾಳಂಬೆ ಬೆಳೆದು ಅಲ್ಲೂ ಸಹ ಲಕ್ಷ ಲಕ್ಷ ಆದಾಯ ಮಾಡಿಕೊಂಡಿದ್ದರು. ಇದೀಗ ಎರಡುವರೆ ವರ್ಷದ ಹಿಂದೆ ೧೫ ನಂಬರ್ ತಳಿಯ ೧೭ ಎಕರೆ ಪಪ್ಪಾಯಿ ಬೆಳೆದಿದ್ದು, ಈ ವರೆಗೂ ಬೆಳೆಗೆ ಮಾಡಿದ ಖರ್ಚ ತೆಗೆದು ೬೦ ಲಕ್ಷ ರೂ. ಪಪ್ಪಾಯಿಯಲ್ಲಿ ಲಾಭ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಹೊಸದಾಗಿ ೧೮ ಎಕರೆ ಪಪ್ಪಾಯಿ ಬೆಳೆದಿದ್ದು, ಇದೀಗ ಕಟಾವು ಶುರುವಾಗಿದ್ದು, ೫ ಲಕ್ಷ ಎಣಿಸಿಕೊಂಡಿದ್ದಾರೆ. ಸದ್ಯ ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಕೆಜಿಗೆ ೧೪ ರೂ. ಬೆಲೆ ಸಿಗುತ್ತಿದ್ದು, ಭಾರಿ ಲಾಭದ ಬರುವುದು ಪಕ್ಕಾ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net