ಶೌಚಗೃಹಗಳು ಬ್ಲಾಕ್ ಆಗಿವೆ ‘ಸಹಕರಿಸಿ’!

Published on

 3 ತಿಂಗಳಿಂದ ಚಿಂತಾಮಣಿ ಕ್ರೀಡಾಂಗಣದಲ್ಲಿ ಶೌಚಕ್ಕೆ ಕ್ರೀಡಾಪಟುಗಳ ಪರದಾಟ | ಜಿಲ್ಲಾ ಉಸ್ತುವಾರಿ ಸಚಿವರ ಸ್ವ-ಕ್ಷೇತ್ರದಲ್ಲೇ ಅವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ಬಯಲುಶೌಚಕ್ಕೆ ಕಡಿವಾಣ ಹಾಕಬೇಕು. ಪ್ರತಿ ಮನೆಗಳಿಗೆ ಕಡ್ಡಾಯ ಶೌಚಗೃಹ ಇರಬೇಕು ಎಂದು ಕೇಂದ್ರ, ರಾಜ್ಯ ಸರ್ಕಾರ ಪ್ರತಿಪಾದಿಸುತ್ತವೆಯಾದರೂ ಚಿಂತಾಮಣಿ ನಗರ ಕ್ರೀಡಾಂಗಣದಲ್ಲಿನ ಶೌಚಗೃಹಗಳು ಇದ್ದೂ ಇಲ್ಲದಂತಾಗಿದ್ದು, ಕ್ರಿಡಾಪಟುಗಳು, ವಾಯುವಿಹಾರಿಗಳು ಶೌಚಕ್ಕೆ ಪರದಾಡುವಂತಾಗಿದೆ.

ಹೌದು..! ಇಲ್ಲಿನ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿನ ಶೌಚಗೃಹಗಳಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಬಳಕೆಗೆ ಯೋಗ್ಯವಾಗಿಲ್ಲ. ಈ ನಡುವೆ ಶೌಚಗೃಹಗಳ ಪೈಪ್‌ಗಳು ಸಂಪೂರ್ಣ ಬ್ಲಾಕ್ ಆದ ಕಾರಣ ಬೀಗ ಹಾಕಿದ್ದು, ಮೂರು ತಿಂಗಳಾದರೂ ದುರಸ್ತಿಗೆ ಕ್ರೀಡಾ ಇಲಾಖೆ ಮುಂದಾಗಿಲ್ಲ.

ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿಕೊಂಡಿರುವ ಚಿಂತಾಮಣಿ ಕ್ರೀಡಾಂಗಣವು ಎಲ್ಲ ರೀತಿಯ ಸವಲತ್ತು ಹೊಂದಬೇಕು ಎಂಬ ಉದ್ದೇಶದಿಂದ ಮಾಜಿ ಸಚಿವ ಚೌಡರೆಡ್ಡಿ, ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮೂಲ ಸೌಲಭ್ಯ ಒದಗಿಸಲು ಮುಂದಾಗಿದಲ್ಲದೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದರು.

ನಿತ್ಯ ಬೆಳಗ್ಗೆ, ಸಂಜೆ ವ್ಯಾಯಾಮಕ್ಕೆ ಜಿಮ್, ಸ್ಕೇಟಿಂಗ್, ಷಟಲ್ ಬ್ಯಾಡ್ಮಿಂಟನ್, ಫುಟ್‌ಬಾಲ್ ಮತ್ತು ಬಾಸ್ಕೇಟ್ ಬಾಲ್‌ಗೆ ಬೇಕಾದ ಸೌಲತ್ತುಗಳ ಜತೆಗೆ ಒಳ ಮತ್ತು ಹೊರಾಂಗಣದಲ್ಲಿ ಸುಸ್ಸಜ್ಜಿತ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಹೊತ್ತ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಕ್ರಿಡಾಪಟುಗಳೊಂದಿಗೆ ಚರ್ಚಿಸದೆ ಅನಾವಶ್ಯಕ ಯೋಜನೆಗಳನ್ನು ತಯಾರಿಸಿ, ಇಲಾಖೆಯ ಲಕ್ಷಾಂತರ ರೂ. ಅನುದಾನವನ್ನು ವ್ಯಯಮಾಡುತ್ತಿದ್ದಾರೆ. ಆದರೆ ಹನ್ನೆರಡು ವರ್ಷಗಳಿಂದ ಮೂಲಭೂತ ಸಮಸ್ಯೆಗಳಿಗೆ ಅದರಲ್ಲೂ ಮಕ್ಕಳ ಕ್ರಿಡಾ ಸಾಮಾಗ್ರಿ, ಶೌಚಗೃಹ ನಿರ್ವಹಣೆ ಯಾವುದೇ ಕ್ರಮವಹಿಸದಿರುವುದು ಕ್ರೀಡಾಪಟುಗಳು ಹಾಗೂ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net