ಮಕ್ಕಳಿಂದ ಶೌಚಗೃಹ, ಕೊಠಡಿ ಸ್ವಚ್ಛತೆ?

ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಬಳಿ ಪ್ರತಿಭಟನೆ ನಡೆಸಿದ ಪಾಲಕರು ಮುಖ್ಯಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರು.
13.06.2024 SDLP 02
ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಬಳಿ ಪ್ರತಿಭಟನೆ ನಡೆಸಿದ ಪಾಲಕರು ಮುಖ್ಯಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರು.
Published on

ಪಾಲಕರ ಆರೋಪ, ಶಾಲೆ ಎದುರು ಪ್ರತಿಭಟನೆ- ಮುಖ್ಯಶಿಕ್ಷಕರ ಜತೆ ವಾಗ್ವಾದ


ಶಿಡ್ಲಘಟ್ಟ: ಪಾಠ ಹೇಳಿಕೊಡಬೇಕಾದ ಶಿಕ್ಷಕರು ಮಕ್ಕಳ ಕೈಯಲ್ಲಿ ಶಾಲೆ ಆವರಣ, ಶೌಚಗೃಹ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಲಕರು ಶಾಲೆ ಎದುರು ಪ್ರತಿಭಟನೆಗೆ ಮುಂದಾದ ಪ್ರಸಂಗ ನಗರದಲ್ಲಿ ವರದಿಯಾಗಿದೆ.
ಮಕ್ಕಳನ್ನು ಶಾಲೆ ಸ್ವಚ್ಛತೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ನಗರದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಪಾಲಕರು ಪ್ರತಿಭಟನೆ ನಡೆಸಿದರು.
ನಾವು ವಿದ್ಯಾವಂತರಲ್ಲದಿದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಮಹದಾಸೆಯಿಂದ ಶಾಲೆಗೆ ಕಳಿಸಿದರೆ ಪಾಠ ಹೇಳಿಕೊಡುವ ಬದಲಿಗೆ ಶಿಕ್ಷಕರು ಪ್ರತಿನಿತ್ಯ ಶಾಲಾ ಆವರಣ, ಶೌಚಗೃಹ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದರು.


ಮೊಟ್ಟೆ, ಹಾಲು ಇಲ್ಲ
ಈ ಶಾಲೆಯಲ್ಲಿ 170ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಐವರು ಶಿಕ್ಷಕರಿದ್ದಾರೆ. ಬಹುತೇಕ ಪಾಲಕರು ಕೂಲಿ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿದ್ದು, ನಮ್ಮಂತೆ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಲೆಗೆ ಕಳುಹಿಸಿದರೆ ಶಾಲೆಯಲ್ಲಿ ಶಿಕ್ಷಣಕ್ಕಿಂತ ಶಾಲೆಯ ಸ್ವಚ್ಛತೆ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಜತೆಗೆ ತಾಲೂಕಿನಾದ್ಯಂತ ಎಲ್ಲ ಶಾಲೆಗಳಲ್ಲಿಯೂ ಮಕ್ಕಳಿಗೆ ಬಿಸಿಯೂಟದ ಜತೆಗೆ ಹಾಲು ಹಾಗೂ ಮೊಟ್ಟೆ ವಿತರಿಸುತ್ತಿದ್ದರೆ, ಈ ಶಾಲೆಯಲ್ಲಿ ಮೊಟ್ಟೆ ಹಾಗೂ ಹಾಲು ವಿತರಿಸುತ್ತಿಲ್ಲ ಎಂದು ಮುಖ್ಯಶಿಕ್ಷಕರ ಜತೆ ವಾಗ್ವಾದ ನಡೆಸಿದರು.
ಸಮಸ್ಯೆ ಬಗೆಹರಿಸುವುದಾಗಿ ಪ್ರಭಾರ ಮುಖ್ಯಶಿಕ್ಷಕರು ನೀಡಿದ ಭರವಸೆ ನಂತರ ಪಾಲಕರು ಪ್ರತಿಭಟನೆ ಕೈಬಿಟ್ಟರು.

ಮುಖ್ಯಶಿಕ್ಷಕರ ಸ್ಪಷ್ಟನೆ
ವರ್ಷಕ್ಕೆ 80 ದಿನ ಮೊಟ್ಟೆ ಕೊಡಬೇಕು ಎಂಬ ನಿಯಮವಿದೆ. ಹಾಗಾಗಿ ನಾವು ವರ್ಷದ ಯಾವುದಾದರೂ 80 ದಿನ ಮೊಟ್ಟೆ ವಿತರಿಸುತ್ತೇವೆ. ಮಕ್ಕಳನ್ನು ಶಾಲೆ ಹಾಗೂ ಶೌಚಗೃಹ ಸ್ವಚ್ಛತೆಗೆ ಬಳಸಿಲ್ಲ. ಮುಖ್ಯಶಿಕ್ಷಕರು ಹಾಗೂ ಇತರ ಶಿಕ್ಷಕರೇ ಸ್ವಚ್ಛತಾ ಕೆಲಸ ಮಾಡಿದ್ದೇವೆ. ಶಾಲೆಗೆ ಅಗತ್ಯವಾಗಿರುವ ನೀರು ಸೇರಿ, ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛ ಮಾಡಲು ಹೆಚ್ಚುವರಿ ಸಿಬ್ಬಂದಿ ಇಲ್ಲ. ಹಾಲಿ ಇರುವ ಶೌಚಗೃಹಗಳು ಶಿಥಿಲಗೊಂಡಿದ್ದು, ಹೊಸದಾಗಿ ಶೌಚಗೃಹ ನಿರ್ಮಾಣಕ್ಕೆ ಇಲಾಖೆಗೆ ಪತ್ರ ಬರೆಯಲಾಗಿದೆ. ಪಾಲಕರ ಮನವಿ ಮೇರೆಗೆ ಶೀಘ್ರವಾಗಿ ಶಾಲಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಪಾಲಕರ ಸಭೆ ಕರೆದು ಶಾಲೆ ಹಾಗೂ ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಪ್ರಭಾರ ಮುಖ್ಯಶಿಕ್ಷಕ ಮೋಹನ್ ಸ್ಪಷ್ಟನೆ ನೀಡಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಮೂರ್ತಿ, ಪಾಲಕರಾದ ಮಂಜುನಾಥ್, ಹರೀಶ್, ನರಸಿಂಹ, ಆನಂದ, ವೆಂಕಟೇಶ್, ಆನಿಲ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net