

ಗೌರಿಬಿದನೂರು : ತಾಲೂಕಿನ ವಾಟದಹೊಸಹಳ್ಳಿ ಕೆರೆಯಿಂದ ಗೌರಿಬಿದನೂರು ನಗರಕ್ಕೆ ನೀರು ಹರಿಸುವ ಯೋಜನೆಯ ವಿವಾದ ಭುಗಿಲೆದ್ದಿದ್ದು, ಶಾಸಕರ ಸಮ್ಮುಖದಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಪರ- ವಿರೋಧ ಮಾತಿನ ಸಮರ ನಡೆಯಿತು.
ವಾಟದಹೊಸಹಳ್ಳಿ ಪಂಚಾಯಿತಿ ಆವರಣದಲ್ಲಿ ಅಮೃತ ಯೋಜನೆಯಡಿ ವಾಟದಹೊಸಹಳ್ಳಿ ಕೆರೆಯ ಒಂಬತ್ತು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ರೂಪುರೇಷಗಳ ಕುರಿತ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಯಾವುದೇ ಕಾರಣಕ್ಕೂ ಕೆರೆ ನೀರನ್ನು ಗೌರಿಬಿದನೂರಿಗೆ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಕೆರೆ ಅಚ್ಚುಕಟ್ಟುದಾರರು ಪಟ್ಟುಹಿಡಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಕೆರೆ ಬಗ್ಗೆ ಕಾಳಜಿ ನನಗೂ ಇದೆ. ನೀವು ಬೇರೆ ಅಲ್ಲ. ಗೌರಿಬಿದನೂರು ಜನ ಬೇರೆ ಅಲ್ಲ. ಯಾವುದೇ ಕಾರಣಕ್ಕೂ ವಾಟದಹೊಸಹಳ್ಳಿ ರೈತರಿಗೆ ಅನ್ಯಾಯ ಮಾಡಿ ನೀರನ್ನು ತೆಗೆದುಕೊಂಡು ಹೋಗುವುದಿಲ್ಲ. ಎತ್ತಿನಹೊಳೆ ಯೋಜನೆಯಡಿ ಕೆರೆಗೆ ನೀರು ಹರಸಿದ ಬಳಿಕವೇ ನಗರಕ್ಕೆ ನೀರು ಪೂರೈಸಲಾಗುವುದು. ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಯೋಜನೆ ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ಕೃಷಿಗೆ ಬಳಸುವುದಿಲ್ಲ ಎಂದರು.
ಎಲ್ಲ ಜನರ ಸಮಸ್ಯೆಗಳನ್ನು ಹಾಗೂ ತಾಲೂಕಿನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ವಿನಾಕಾರಣ ಕೆಲವರು ಯೋಜನೆ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಸಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ರೈತರ ಮನವೊಲಿಸುವ ಪ್ರಯತ್ನ ನಡೆಸಿದರು.
ಪ್ರತಿಭಟನೆಗೆ ನಿರ್ಧಾರ
ಎರಡೂ ಗುಂಪುಗಳ ನಡುವೆ ಪರ ವಿರೋಧ ಮಾತಿನ ಚಕಮಕಿ ನಡೆದವು. ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಸಭೆ ಆಯೋಜಿಸಿದ್ದಾರೆ ಎಂದು ಆರೋಪಿಸಿದ ಕೆರೆ ಅಚ್ಚುಕಟ್ಟುದಾರ ರೈತರು, ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಮಂಗಳವಾರ(ಏ.15) ವಾಟದಹೊಸಹಳ್ಳಿಯಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆಸಲು ನಿರ್ಧರಿಸಿದ್ದಾರೆ.
ಯೋಜನೆ ಜಾರಿಗೆ ಮುನ್ನ ಹಲವು ಬೇಡಿಕೆ
ಮುಖಂಡ ವಿವೇಕಾನಂದ ರೆಡ್ಡಿ ಮಾತನಾಡಿ, ವಾಟದಹೊಸಹಳ್ಳಿ ಕೆರೆಯಿಂದ ನಗರಕ್ಕೆ ನೀರು ಹರಿಸುವ ಯೋಜನೆ ಜಾರಿಗೆ ಮುನ್ನ ಕೆರೆ ಹಾಗೂ ಈ ಭಾಗದಲ್ಲಿರುವ ಮೂರು ರಾಜಕಾಲುವೆಗಳಿಗೆ ಎತ್ತಿನಹೊಳೆ ಯೋಜನೆ ನೀರು ಹರಿಸಿ. ವಾಟದಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೆ ನೀರು ಸರಬರಾಜು ಮಾಡಿ. ನಂತರ ಕೆರೆಯಿಂದ ಗೌರಿಬಿದನೂರಿಗೆ ನೀರು ತೆಗೆದುಕೊಂಡು ಹೋಗಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.
ಜಕ್ಕಲಮಡುವಿನಿಂದ ಪೂರೈಸಲಿ
ರೈತ ಮುಖಂಡ ಮಾಳಪ್ಪ ಮಾತನಾಡಿ, ವಾಟದಹೊಸಹಳ್ಳಿ ಕೆರೆಯಿಂದ ನಗರಗೆರೆ ಹೋಬಳಿಯ ವಿವಿಧ ಕೆರೆಗಳಿಗೆ ನೀರು ಹರಿಯಲಿದ್ದು, 75 ಹಳ್ಳಿಗಳ ಜನಕ್ಕೆ ಆಧಾರವಾಗಿದೆ. ನಮ್ಮ ಹೋಬಳಿ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು, ಕೃಷಿ ಪ್ರಧಾನ ಹಾಗೂ ಹೈನುಗಾರಿಕೆ ಅವಲಂಬಿಸಿದೆ. ಇಲ್ಲಿ ಯಾವುದೇ ರೀತಿಯ ನದಿ ನಾಲೆಗಳಿಲ್ಲ. ಕಾರ್ಖಾನೆಗಳಿಲ್ಲ. ಈ ಭಾಗವನ್ನು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಏಕಾಏಕಿ ನೀರನ್ನು ಬೇರೆಡೆಗೆ ಕೊಂಡೊಯ್ಯಲು ಯೋಜನೆ ರೂಪಿಸಿರುವುದು ಖಂಡನೀಯ. ನಮ್ಮ ಕೆರೆ ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ಕೆರೆ ನೀರನ್ನು ನಗರಕ್ಕೆ ಹರಿಸಲು ಬಿಡುವುದಿಲ್ಲ. ಯೋಜನೆಯಿಂದ ದೂರ ಸರಿಯಬೇಕು. ಬೇಕಾದರೆ ಚಿಕ್ಕಬಳ್ಳಾಪುರದ ಜಕ್ಕಲುಮಡು ಜಲಾಶಯದಿಂದ ಗೌರಿಬಿದನೂರಿಗೆ ನೀರು ಹರಿಸುವ ಯೋಜನೆ ರೂಪಿಸಲಿ ಎಂದರು.