

ಸಿದ್ದಾಪುರ: ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸಲು ಅರಣ್ಯ ಇಲಾಖೆಯಿಂದ ಸೆ.17 ಮತ್ತು 18ರಂದು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ತೋಟದ ಕಾರ್ಮಿಕರು, ಗ್ರಾಮಸ್ಥರು ಸಹಕರಿಸಬೇಕು. ಅಲ್ಲದೆ ಕಾರ್ಯಾಚರಣೆ ವೇಳೆ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹಲವು ದಿನಗಳಿಂದ ಗದ್ದೆ ಹಾಗೂ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಟ್ಟು ಬೆಳೆ ನಷ್ಟ ಮಾಡುತ್ತಿದ್ದು, ಹೀಗಾಗಿ ಈ ಭಾಗದಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗಟ್ಟಬೇಕೆಂದು ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿಯವರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಕುಳ್ಳೂರು, ಐಮಂಗಲ, ಮಗ್ಗುಲ, ಪುದುಕೋಟೆ, ದೇವಣಗೇರಿ, ಚಂಬೆಬೆಳ್ಳೂರು, ಕಾವಾಡಿ, ಕಣ್ಣಂಗಾಲ, ಬೆಳ್ಳರಿಮಾಡು, ಮೈತಾಡಿ, ಚಾಮಿಯಾಲ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಆನೆಗಳನ್ನು ಕಾಡಿಗಟ್ಟಲಾಗುವುದು ಎಂದು ತಿಳಿಸಿದ್ದಾರೆ.