ಮೇಲುಕೋಟೆಯಲ್ಲಿ ಪ್ರಥಮ ತೆಪ್ಪೋತ್ಸವ ಇಂದು

12mlk1
Published on

ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ಪೂರ್ವಭಾವಿಯಾಗಿ ಮಾ.13ರಂದು ರಾತ್ರಿ 7.30ಕ್ಕೆ ಪ್ರಥಮ ತೆಪ್ಪೋತ್ಸವ ಕಲ್ಯಾಣಿಯಲ್ಲಿ ನಡೆಯಲಿದೆ.


ತೆಪ್ಪೋತ್ಸವ ಸಂಬಂಧ ಕಲ್ಯಾಣಿ ಸಮುಚ್ಚಯಕ್ಕೆ ದೀಪಾಲಂಕಾರ ಮಾಡಲಾಗುತ್ತಿದೆ. ಅಂದು ಪಾಂಡವಪುರ ಖಜಾನೆಯಿಂದ ತಂದ ಅಮೂಲ್ಯ ಮುತ್ತುಮುಡಿಯೊಂದಿಗೆ ಅಲಂಕೃತನಾದ ಶ್ರೀ ಚೆಲುವನಾರಾಯಣ ಸ್ವಾಮಿಯ ಭವ್ಯ ಉತ್ಸವ ಕಲ್ಯಾಣಿಗೆ ತಲುಪಲಿದೆ. ತೆಪ್ಪೋತ್ಸವ ಶ್ರೀದೇವಿ, ಭೂದೇವಿ, ಆಚಾರ್ಯ ರಾಮಾನುಜರ ಸಮೇತನಾಗಿ ಸ್ವಾಮಿಗೆ ನಡೆಯಲಿದ್ದು ಆರಂಭದಲ್ಲಿ ಮುಹೂರ್ತ ಪಠಣದ ನಂತರ ಚಾಲನೆ ಸಿಗಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಮಾಹಿತಿ ನೀಡಿದ್ದಾರೆ. ಅಂದು ನಾದ ಕೈಂಕರ್ಯವೂ ಆರಂಭವಾಗಲಿದ್ದು ವಿದ್ವಾನ್ ಆನಂದ್, ಅಭಿಲಾಷ್, ಕುಮಾರ್ ನಾದಸ್ವರ ನುಡಿಸಲಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜ್ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ ಅನೂಚಾನ ಸತ್ ಸಂಪ್ರದಾಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಎಸ್‌ಎನ್‌ಐ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ವೈರಮುಡಿ ಬ್ರಹ್ಮೋತ್ಸವ ವೇಳೆ ಮುಂದುವರಿಸಲಾಗುತ್ತಿದೆ. ಮಾ.17ರಿಂದ 28ರವರೆಗೆ ನಾದಸ್ವರ ಕಲಾವಿದರು ವಿವಿಧ ಉತ್ಸವ, ವಾಹನೋತ್ಸವ, ಅಭಿಷೇಕಗಳಲ್ಲಿ ಮಂಗಳವಾದ್ಯ ನುಡಿಸಲಿದ್ದಾರೆ ಎಂದು ದೇವಾಲಯದ ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ, ಪರಿಚಾರಕ ಪಾರುಪತ್ತೇಗಾರ್ ಎಂ.ಎನ್.ಪಾರ್ಥಸಾರಥಿ ತಿಳಿಸಿದ್ದಾರೆ.

ಬ್ರಹ್ಮೋತ್ಸವಕ್ಕೆ ಸಿದ್ಧತೆ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವೈರಮುಡಿ ಉತ್ಸವವನ್ನು ವಿಶೇಷವಾಗಿ ಆಚರಿಸಲು ಶ್ರಮಿಸುತ್ತಿದ್ದು, ವಿಭಿನ್ನ ದೀಪಾಲಂಕಾರ ಮಾಡಲು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗಾಗಲೇ ದೀಪಾಲಂಕಾರ ಕಾರ್ಯ ಭರದಿಂದ ಸಾಗಿದೆ. ಮಾ.17ರಿಂದ 28ರವರೆಗೆ ನಡೆಯುವ ಜಾತ್ರಾ ಅವಧಿಯಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಪೊಲೀಸ್ ಭದ್ರತೆ, ವೈದ್ಯಕೀಯ ಸೌಲಭ್ಯ, ಸಾರಿಗೆ ವ್ಯವಸ್ಥೆ, ವಾಹನಗಳ ಪಾರ್ಕಿಂಗ್, ಅಚ್ಚುಕಟ್ಟಾಗಿ ದೇವಾಲಯದ ಉತ್ಸವಗಳ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net