

| ಚಂದ್ರಶೇಖರ ಗಂಧನಹಳ್ಳಿ
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕೆಲವು ಹೆಸರುಗಳು ಶಾಶ್ವತವಾಗಿ ಅಚ್ಚಳಿಯದ ಅಕ್ಷರಗಳಲ್ಲಿ ಬರೆಯಲ್ಪಟ್ಟಿವೆ. ಅವುಗಳಲ್ಲಿ ಒಂದು ಟಿ.ಪಿ. ಕೈಲಾಸಂ. ಕನ್ನಡ ನಾಟಕ ಕ್ಷೇತ್ರದಲ್ಲಿ ಸಂಶೋಧನಾ ಮನೋಭಾವದೊಂದಿಗೆ ನೂತನ ಚಿಂತನೆ, ವ್ಯಂಗ್ಯ, ಹಾಸ್ಯ ಮತ್ತು ವಾಸ್ತವಿಕತೆಯನ್ನು ಪರಿಚಯಿಸಿದ ಅವರು, ಕೇವಲ ನಾಟಕ ಬರೆದಿದ್ದಕ್ಕಾಗಿ ನಾಟಕಕಾರರಾಗಿ ಉಳಿಯದೆ ಒಬ್ಬ ನಿರ್ದೇಶಕನಾಗಿ, ನಟನಾಗಿ, ದಾರ್ಶನಿಕನಾಗಿ, ಶಿಕ್ಷಣ ತಜ್ಞನಾಗಿ, ಸಮಾಜ ಸುಧಾರಕನಾಗಿ ಕಾರ್ಯನಿರ್ವಹಿಸಿದ್ದಾರೆ. ಆದ್ದರಿಂದಲೇ ಇಂದಿಗೂ ಅವರನ್ನು "ಕನ್ನಡ ಪ್ರಹಸನ ಪಿತಾಮಹ" ಎಂದು ಕರೆಯಲಾಗುತ್ತದೆ.
ಟಿ.ಪಿ. ಕೈಲಾಸಂ 1884ರ ಜುಲೈ 29 ರಂದು ತಮಿಳು ಮೂಲದ ತ್ಯಾಗರಾಜ ಪರಮಶಿವ ಅಯ್ಯರ್ ಮತ್ತು ಕಮಲಮ್ಮ ದಂಪತಿಗಳ ಪುತ್ರರಾಗಿ ಬೆಂಗಳೂರಿನಲ್ಲಿ ಜನಿಸಿದರು. ತ್ಯಾಗರಾಜ ಪರಮಶಿವ ಅಯ್ಯರ್ ಮೈಸೂರು ಸರ್ಕಾರದಲ್ಲಿ ಕಂದಾಯ ಸಂಗ್ರಾಹಕರಾಗಿ, ಮೈಸೂರು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಕೈಲಾಸಂ ಬೆಂಗಳೂರು, ಹಾಸನ, ಮೈಸೂರಿನಲ್ಲಿ ಶಾಲಾ ಶಿಕ್ಷಣ ಮುಗಿಸಿ, 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ, ಬಿಎ ಪದವಿ ಗಳಿಸಿದರು. ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ಗೆ ತೆರಳಿ ಜಿಯೋಲಜಿ (ಭೂಗರ್ಭಶಾಸ್ತ್ರ) ವಿಷಯದಲ್ಲಿ 6 ವರ್ಷಗಳ ಕಾಲ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು.
ಕೈಲಾಸಂ ಲಂಡನ್ನಲ್ಲಿದ್ದಾಗ ಯೂಜಿನ್ ಸಾಂಡೋ ಎಂಬ ಖ್ಯಾತ ವ್ಯಾಯಾಮಪಟುವಿನ ಬಳಿ ‘ಫಿಸಿಕಲ್ ಕಲ್ಚರ್’ ಶಿಕ್ಷಣ ಪಡೆದಿದ್ದರು. ಇಂಗ್ಲೆಂಡ್ ಪುಟ್ ಬಾಲ್ ತಂಡದ ಗೋಲ್ಕೀಪರ್ ಆಗಿ ಆಡುತ್ತಿದ್ದರು. ಇವರ ಮೈಕಟ್ಟು ಅತ್ಯಂತ ದೃಢವಾಗಿತ್ತು.
ಶಾಲಾ ದಿನಗಳಿಂದಲೇ ಕೈಲಾಸಂಗೆ ನಾಟಕ, ಕಲೆ, ಸಂಗೀತದ ಮೇಲೆ ವಿಶೇಷ ಆಸಕ್ತಿ ಇತ್ತು. ತಂದೆಯ ಒತ್ತಾಸೆಯದಿಂದ ಉನ್ನತ ಶಿಕ್ಷಣ ಪಡೆದು, ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಸಂಶೋಧಕರಾಗಿ ಸೇರಿದ್ದರೂ ಕೇವಲ ಐದು ವರ್ಷಕ್ಕೆನೇ ಉದ್ಯೋಗ ತೊರೆದು ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ಇದು ವಿಜ್ಞಾನಿ ಮನೋಭಾವದ ಜತೆಗೆ ಸಾಹಿತ್ಯ ಪ್ರಪಂಚದ ಮಮಕಾರ ಅವರ ವ್ಯಕ್ತಿತ್ವವನ್ನು ವಿಭಿನ್ನವಾಗಿ ರೂಪಿಸಿತು.
ಕೈಲಾಸಂ ಕನ್ನಡ ನಾಟಕ ಕ್ಷೇತ್ರಕ್ಕೆ ಬಂದಾಗ, ಅದು ಪಾರಂಪರಿಕ ಮೇಳನಾಟಕಗಳ ಹಂತದಲ್ಲಿ ಇತ್ತು. ನಾಟಕಗಳು ಹೆಚ್ಚಿನದಾಗಿ ಪೌರಾಣಿಕ ಕಥೆಗಳ ಆಧಾರಿತವಾಗಿದ್ದವು. ಆದರೆ ಕೈಲಾಸಂ ಪಾಶ್ಚಾತ್ಯ ನಾಟಕಶೈಲಿಯ ಪ್ರಭಾವದಿಂದ ಸಮಾಜಮುಖಿ ವಿಚಾರಗಳು, ಹಾಸ್ಯ, ವ್ಯಂಗ್ಯ, ಮನಶ್ಯಾಸ್ತ್ರೀಯ ಚಿತ್ರಣ ಇವುಗಳನ್ನು ಕನ್ನಡಕ್ಕೆ ಪರಿಚಯಿಸಿದರು.
ಆಸ್ಕರ್ ವೈಲ್ಡ್, ಜಾರ್ಜ್ ಬರ್ನಾಡ್ ಶಾ, ಇಬ್ಸನ್, ಷೇಕ್ಸ್ಪಿಯರನಂತಹ ಖ್ಯಾತ ನಾಟಕಕಾರರ ನಾಟಕಗಳು ಕೈಲಾಸಂರವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಇವುಗಳಂತೆಯೇ ನಮ್ಮಲ್ಲಿನ ನಾಟಕ ಕ್ಷೇತ್ರವನ್ನು ಇಂದಿನ ಯುಗಕ್ಕೆ ಕೊಂಡೊಯ್ಯಬೇಕೆಂಬ ತುಡಿತ ಸದಾ ಅವರಲ್ಲಿ ಕಾಡುತ್ತಿತ್ತು. ಅದಕ್ಕಾಗಿ ಅವರು ಸರ್ವಸ್ವವನ್ನೂ ತೊರೆದು ಅಲೆಮಾರಿಯಾದರು.
ಕೈಲಾಸಂ ಸ್ವತಃ ವರದಾಚಾರ್ಯರ ನಾಟಕಗಳಲ್ಲಿ ಪಾತ್ರಧಾರಿಯಾಗಿದ್ದುದಲ್ಲದೆ ಆಚಾರ್ಯರು ತೀರಿಕೊಂಡಾಗ ಅವರ ಕಂಪೆನಿ ಯಜಮಾನಿಕೆ ವಹಿಸಿಕೊಂಡರು. “ಕೂತಲ್ಲಿ ಕಂಪೆನಿ... ನಿಂತಲ್ಲಿ ನಾಟ್ಕ” ಅವರು ಹೋದಲ್ಲೆಲ್ಲಾ ನಾಟಕವಾಡಿಸುವರು. ತಾವೇ 4 ಗಂಟೆಗಳ ಕಾಲ ಏಕಪಾತ್ರಾಭಿನಯ ಮಾಡಿ ಪ್ರದರ್ಶನಗಳನ್ನು ನೀಡುತ್ತಿದ್ದರು. ಅವರಿಗೆ ಕೈ ಬರಹದ ಪ್ರತಿ ಅವಶ್ಯವಿರಲಿಲ್ಲ. ನಾಲ್ಕಾರು ನಾಟಕಗಳನ್ನೂ, ನೂರಾರು ಹಾಡುಗಳನ್ನೂ, ಹಲವಾರು ಅಣಕುವಾಡುಗಳನ್ನೂ ನೀಡಿ, ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದರು. ಇಂದು ಈ ಊರು, ನಾಳೆ ಮತ್ತೊಂದೂರು, ತಂಗುವ ಸ್ಥಳ ಅನಿರ್ದಿಷ್ಟ, ಇವರ ಇಡೀ ಜೀವಮಾನವೇ ಹೀಗೆ ಜರುಗಿತು.
ಕೈಲಾಸಂ ಬರೆದುದಕ್ಕಿಂತ ಹೆಚ್ಚಾಗಿ ಹೇಳಿ ಬರೆಸಿದ ಇತರರು ಬರೆದುಕೊಂಡ ನಾಟಕಗಳೇ ಹೆಚ್ಚು. ಟೊಳ್ಳೂಗಟ್ಟಿ, ಬಹಿಷ್ಕಾರ, ಗಂಡಸ್ಕತ್ರಿ, ಪೋಲಿಕಿಟ್ಟಿ, ಸೂಳೆ, ನಂತರ ಕನ್ನಡ ಸಾಮಾಜಿಕ ನಾಟಕಗಳನ್ನೂ ತಾವರೆಕೆರೆ (ಕಥಾಸಂಗ್ರಹ), ಕೋಳಿಕೇರಂಗ (ಹಾಡುಗಳು), ಕರ್ಣ, ಕೀಚಕ (ಇಂಗ್ಲಿಷ್ ನಾಟಕಗಳು).
‘ತಿಪ್ಪಾರಳ್ಳಿ’, ‘ಕೊಳೀಕೆರಂಗಾ’, ‘ನೋಡಿದ್ರಾ ನಂ ನಂಜೀನಾವ’ ಕೇಳಿದರೆ ಪಾಶ್ಚಾತ್ಯರ ಸಂಗೀತದ ಮರ್ಮಗಳ ಐತಿಹ್ಯ ಇವರ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಿತು ಎಂಬುದನ್ನು ಊಹಿಸಬಹುದು. ಇವರ ಇಂಗ್ಲಿಷ್ ಕವನಗಳಲ್ಲೂ, ನಾಟಕಗಳಲ್ಲೂ ಕಾಣ ಬರುವ ಶೈಲಿ ಇವರಿಗೆ ಆ ಭಾಷೆಯ ಮೇಲಿದ್ದ ಅಧಿಪತ್ಯವನ್ನು ಸಾಬೀತು ಪಡಿಸುತ್ತದೆ. ಪಾಶ್ಚತ್ಯ ತಂತ್ರಗಾರಿಕೆ ಬಳಸಿ ಹಲವು ನಾಟಕಗಳನ್ನು ರಚಿಸಿದ್ದಲ್ಲದೆ ರವೀಂದ್ರನಾಥರು ಬೆಂಗಳೂರಿಗೆ ಬಂದಾಗ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ ಟೊಳ್ಳುಗಟ್ಟಿ ಪ್ರಥಮ ಬಹುಮಾನ ಗಳಿಸಿತಲ್ಲದೆ ಕನ್ನಡ ರಂಗಭೂಮಿಯಲ್ಲಿ ಕ್ರಾಂತಿ ಎಬ್ಬಿಸಿತು.
ಕೇವಲ ನಾಟಕಗಳಷ್ಟೇ ಅಲ್ಲದೆ ಇವರು ಕಟ್ಟುತ್ತಿದ್ದ ಅಣಕವಾಡುಗಳು, ಕುಂಟ್ಪದಿಗಳು, ವಕ್ರೋಕ್ತಿಗಳು, ಚುಟುಕಚಾಟೋಕ್ತಿಗಳು, ಜೋಕುಗಳು ಅಸಂಖ್ಯಾತವಾಗಿವೆ. ಇದನ್ನು ಕೇಳುವ ಜನ ಈಗಲೂ ಕೈಲಸಂರನ್ನು ಸ್ಮರಿಸುತ್ತಾರೆ.
ನಾಟಕದ ಅತೀ ನಾಟಕೀಯತೆಯನ್ನು ಸಾಮಾನ್ಯ ಮಟ್ಟಕ್ಕೆ ತಂದು, ಜನಸಾಮಾನ್ಯರು ತಮ್ಮ ಬಿಂಬವನ್ನು ಕಾಣುವಂತೆ ಮಾಡಿದರು. ಅದರಲ್ಲಿರುವ ಗ್ರಾಂಥಿಕ ಭಾಷೆಯನ್ನು, ಆಡು ಮಾತಿಗೆ ಬದಲಾಯಿಸಿ, ಜನರಿಗೆ ಹೆಚ್ಚು ತಲುಪುವಂತೆ ಮಾಡಿದರು. ಅವರು ನಾಟಕಗಳಲ್ಲಿನ ಕನ್ನಡಾಂಗ್ಲೋ ಪದಗಳ ಬಳಕೆ ಬಹು ವಿಶಿಷ್ಟವಾದುದು.
ಕೈಲಾಸಂ ಅತಿ ಸರಳ ಜೀವನ ಶೈಲಿಯನ್ನು ಅನುಸರಿಸಿದರು. ಧನ- ಸಂಪತ್ತಿನ ಆಸೆ ಅವರಿಗೆ ಇರಲಿಲ್ಲ. ನಾಟಕವೇ ಅವರ ಬದುಕಿನ ಧ್ಯೇಯ. ಸಮಾಜದಲ್ಲಿ ಬದಲಾವಣೆ ತರಲು ಸಾಹಿತ್ಯವೇ ಶಕ್ತಿ ಎಂಬ ನಂಬಿಕೆ ಅವರಲ್ಲಿತ್ತು. ತಮ್ಮ ನಾಟಕಗಳ ಮೂಲಕ ಕನ್ನಡಿಗರನ್ನು ನಗಿಸಿ, ನಲಿಸಿ ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವರು ಕೈಲಾಸಂ, ಅದಕ್ಕಾಗಿಯೆ 'ಕನ್ನಡಕ್ಕೊಬ್ಬನೇ ಕೈಲಾಸಂ'. 1945ರಲ್ಲಿ ಮದರಾಸಿನಲ್ಲಿ ನಡೆದ 29ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೈಲಾಸಂ, 1946ರಲ್ಲಿ ನಿಧನರಾದರು. ಆದರೆ ಅವರ ಕೃತಿಗಳು ಇಂದಿಗೂ ಕನ್ನಡ ನಾಟಕ ಕ್ಷೇತ್ರದಲ್ಲಿ ಜೀವಂತವಾಗಿವೆ.