

ಅರಕಲಗೂಡು: ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ಭಕ್ತರು ಮಂಗಳವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಿ ದೀಪಗಳನ್ನು ಹಚ್ಚಿ ಸಂಭ್ರಮಿಸಿದರು.
ಗ್ರಾಮೀಣ ಪ್ರದೇಶದಲ್ಲಿ ದೇವಸ್ಥಾನಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಪೂಜೆ, ಅಭಿಷೇಕ, ಪ್ರಸಾದ ವಿನಿಯೋಗ ಮಾಡಲಾಯಿತು.
ತೊಡಕಿನ ಕಲ್ಲಮ್ಮ ಹಬ್ಬ: ತಾಲೂಕಿನ ಆನಂದೂರು ಗ್ರಾಮದಲ್ಲಿ ವರ್ಷಕ್ಕೊಮ್ಮೆ ಬಾಗಿಲು ತೆರೆದು ಪ್ರಜೆ ಸಲ್ಲಿಸುವ ತೊಡಕಿನ ಕಲ್ಲಮ್ಮ ದೇವಸ್ಥಾನದಲ್ಲಿ ಹಬ್ಬದ ಸಡಗರ ಜೋರಾಗಿತ್ತು. ದೀಪಾವಳಿ ಹಬ್ಬದಂದು ದೇವಸ್ಥಾನದ ಬಾಗಿಲು ತೆರೆದು ಮೂಲ ದೇವರ ಮೂರ್ತಿಯನ್ನು ಕಾವೇರಿ ನದಿಗೆ ಕೊಂಡೊಯ್ದು ಗಂಗಾಸ್ನಾನ ಮಾಡಿಸಿ ಕರೆತರಲಾಯಿತು. ದೇವಸ್ಥಾನದಲ್ಲಿ ನಡೆದ ಪ್ರಜಾ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ರಾಸುಗಳನ್ನು ಸಿಂಗರಿಸಿ ಊರಿನ ಸುತ್ತ ಮೆರವಣಿಗೆ ನಡೆಸಲಾಯಿತು. ದೇವಸ್ಥಾನದಲ್ಲಿ ಹರಕೆ ಸಲ್ಲಿಸಿದ ಭಕ್ತರು ಜಾನುವಾರುಗಳಿಗೆ ಆರೋಗ್ಯ ಕರುಣಿಸುವಂತೆ ಪ್ರಾರ್ಥಿಸಿದರು. ಗ್ರಾಮದಲ್ಲಿ ಮಂಗಳವಾರ ರಾತ್ರಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನವಿತ್ತು.
ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಪೂಜಾ ಮಹೋತ್ಸವ ಸಂಭ್ರಮದಿಂದ ಜರುಗಿತು. ದೇವಸ್ಥಾನದಲ್ಲಿ ಪೂಜಾ ವಿಧಾನಗಳು ನೆರವೇರಿದವು. ಶಾಸಕ ಎ.ಮಂಜು ಪಾಲ್ಗೊಂಡಿದ್ದರು.