ಸಮರ್ಪಕ ಬಸ್​ ವ್ಯವಸ್ಥೆ ಕಲ್ಪಿಸಲು ಪಟ್ಟು

Rmgm-Ph-001-Bus - Thade-Students-Erehalli-kutgal Hobali Ramgm- 18-9-2024
Published on

*ಎರೇಹಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ರಾಮನಗರ

ತಾಲೂಕಿನ ಕೂಟಗಲ್​ ಹೋಬಳಿ ಎರೇಹಳ್ಳಿ ಗ್ರಾಮಕ್ಕೆ ಸರಿಯಾದ ವೇಳೆಗೆ ಬಸ್​ಗಳು ಬರುತ್ತಿಲ್ಲ ಎಂದು ಶಾಲಾ - ಕಾಲೇಜು ವಿದ್ಯಾರ್ಥಿಗಳು ಬುಧವಾರ ಬೆಳಗ್ಗೆ ಗ್ರಾಮದ ಬಸ್​ ನಿಲ್ದಾಣದಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಎರೇಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮದ ವಿದ್ಯಾರ್ಥಿಗಳು ರಾಮನಗರದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಮನಗರದಿಂದ ಕೂಟಗಲ್​ ಮಾರ್ಗವಾಗಿ ಮಾಗಡಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಎರೇಹಳ್ಳಿ ದೊಡ್ಡ ಗ್ರಾಮವಾಗಿದ್ದು, ರಾಮನಗರದಿಂದ 12 ಕಿಮೀ ದೂರದಲ್ಲಿದೆ. ನೂರಾರು ವಿದ್ಯಾರ್ಥಿಗಳ ಓಡಾಟಕ್ಕೆ ಬಸ್​ಗಳೇ ನಿರ್ಣಾಯಕ. ಈ ಮಾರ್ಗದಲ್ಲಿ ಕೆಎಸ್​ಆರ್​ಟಿಸಿ ಬಸ್​ ಸೌಲಭ್ಯ ಬಿಟ್ಟರೆ ಯಾವುದೇ ಖಾಸಗಿ ಬಸ್​ ಸಂಚರಿಸುವುದಿಲ್ಲ. ಹೆಚ್ಚಿನ ಬಸ್​ ಅವಶ್ಯಕತೆ ಇದ್ದರೂ ಕೇವಲ ಬೆರಳೆಣಿಕೆಯಷ್ಟು ಬಸ್​ಗಳು ಓಡಾಟ ನಡೆಸುತ್ತವೆ ವಿದ್ಯಾರ್ಥಿಗಳು ಆರೋಪಿಸಿದರು.

ಇರುವ ಬಸ್​ಗಳು ಸರಿಯಾದ ವೇಳೆಗೆ ಬರುವುದಿಲ.

ಜತೆಗೆ ಹಳೇ ಬಸ್​ಗಳನ್ನು ಓಡಿಸುತ್ತಿರುವ ಕಾರಣ ಬಸ್​ಗಳು ಅಲ್ಲಲ್ಲೇ ಕೆಟ್ಟು ನಿಲ್ಲುತ್ತವೆ. ಎರೇಹಳ್ಳಿಗೆ ಬರುತ್ತಿದ್ದ ಬಸ್​ ವಾರಕ್ಕೆ ಎರಡೂ ದಿನವೂ ಬರುತ್ತಿಲ್ಲ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ರಾಮನಗರಕ್ಕೆ ಬರಬೇಕೆಂದರೆ ಬಸ್​ಗಳೇ ಇಲ್ಲ. ಬೆಳಗಿನ ವೇಳೆಯಲ್ಲಿ ನಿಗದಿತ ಸಮಯಕ್ಕೆ ಬಸ್​ ಬಾರದೆ ಶಾಲಾ&ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ. ಬಸ್​ ಟಕದ ಅಧಿಕಾರಿಗಳಿಗೆ ತಿಳಿಸಿದರೂ ಸೂಕ್ತ ಬಸ್​ ವ್ಯವಸ್ಥೆ ಮಾಡಿಲ್ಲ. ಇದರಿಂದ ತರಗತಿಗೆ ಹೋಗಲು ಸಾಧ್ಯವಗುತ್ತಿಲ್ಲ. ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಸೂಕ್ತ ಬಸ್​ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಬಸ್​ಗಳನ್ನು ತಡೆದು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಸ್​ಗಳು ನಿಂತಲ್ಲೇ ನಿಂತವು. ಸ್ಥಳಕ್ಕೆ ಅಧಿಕಾರಿಗಳು ಬರಬೇಕು. ನಮ್ಮ ಸಮಸ್ಯೆ ಕೇಳಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಈ ವೇಳೆ ಗ್ರಾಮದ ಮುಖಂಡರು ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಾರಿಗೆ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ, ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ, ನಿಮಗೂ ಶಾಲಾ& ಕಾಲೇಜಿಗೆ ಹೋಗಲು ತಡವಾಗುತ್ತಿದೆ ಎಂದು ವಿದ್ಯಾರ್ಥಿಗಳನ್ನು ಸಮಾಧಾನಿಸಿ, ಪ್ರತಿಭಟನೆ ಕೈಬಿಡಿಸಿ ಬಸ್​ಗಳನ್ನು ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net