

ಮಾನ್ವಿ: ನಮ್ಮ ತಂದೆ, ಮಾಜಿ ಸಂಸದ ಎ.ವೆಂಕಟೇಶ ನಾಯಕ ಕಾಲದಿಂದಲೂ ಕಾಂಗ್ರೆಸ್‌ನಲ್ಲಿ ಇದ್ದ ನನಗೆ ಅಲ್ಲಿನ ಶೋಷಣೆಯಿಂದ ಬೇಸತ್ತು ಬಿಜೆಪಿ ಸೇರಿರುವುದಾಗಿ ಮಾಜಿ ಸಂಸದ ಬಿ.ವಿ.ನಾಯಕ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಂದರೆ ಕೇಂದ್ರ ಮಂತ್ರಿ ಮಾಡುವುದಾಗಿ ನನಗೆ ಪಕ್ಷದ ನಾಯಕರು ಆಶ್ವಾಸನೆ ನೀಡಿದ್ದರು. ಆಗ ಕಾಂಗ್ರೆಸ್ ಮುಖಂಡರು ನನಗೆ ದಾರಿ ತಪ್ಪಿಸಿದರು ಎಂದರು.
ನಾನು ಬಿಜೆಪಿಗೆ ಬರಲು ಶಾಸಕ ಕೆ.ಶಿವನಗೌಡ ಕಾರಣ ಅಲ್ಲ. ಮಾನ್ವಿ ಕ್ಷೇತ್ರದ ಜನರು, ಸ್ಥಳೀಯ ಮುಖಂಡರು ಮಾನ್ವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬರಬೇಕು ಎಂದು ಬಲವಂತ ಮಾಡಿದರು. ಹೀಗಾಗಿ ಇಲ್ಲಿನ ಮುಖಂಡರ, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದೇನೆ. ಬಿಜೆಪಿ ಸೇರುವಾಗ ಯಾವುದೇ ಬೇಡಿಕೆ ಇಟ್ಟಿಲ್ಲ. ನನ್ನ ಸೇರ್ಪಡೆಗೆ ಮಾನಪ್ಪ ನಾಯಕ ಹಾಗೂ ಕೋಟ್ರೇಶಪ್ಪ ಕೋರಿ ಒಮ್ಮತ ಸೂಚಿಸಿದ್ದಾರೆ ಎಂದು ಬಿ.ವಿ.ನಾಯಕ ತಿಳಿಸಿದರು.
ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಮಾನ್ವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಕೀರ್ತಿರಡ್ಡಿ, ಮುಖಂಡರಾದ ಮಾನಪ್ಪ ನಾಯಕ, ಕೋಟ್ರೇಶಪ್ಪ ಕೋರಿ, ಮಲ್ಲನಗೌಡ ನಕ್ಕುಂದಿ, ತಿಮ್ಮರಡ್ಡಿ ಭೋಗಾವತಿ, ಶರಣಪ್ಪಗೌಡ ನಕ್ಕುಂದಿ, ಅರುಣಚಂದಾ, ಗುರು ಕಣ್ಣುರು ಇತರರು ಇದ್ದರು.