ಸಿ ಆ್ಯಂಡ್ ಡಿ ಭೂಮಿ ರೈತರಿಗೆ ಹಕ್ಕುಪತ್ರ

11spt1
ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿ ಜಂಕ್ಷನ್‌ನಲ್ಲಿ ನಡೆದ 20 ಕೋಟಿ ರೂ.ರಸ್ತೆ ಅಭಿವೃದ್ಧಿ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಡಾ.ಮಂತರ್‌ಗೌಡ, ಭವಾನಿ, ಯಶಾಂತ್, ಚಂದ್ರಮೌಳಿ ಇದ್ದರು.
Published on

ಸೋಮವಾರಪೇಟೆ: ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಭೂಮಿ ರೈತರ ಆಸ್ತಿಯಾಗಿರುವುದರಿಂದ ಅಂತಹ ಜಾಗದ ಹಕ್ಕುಪತ್ರಗಳನ್ನು ರೈತರಿಗೆ ಕೊಡಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರೈತರಿಗೆ ಭರವಸೆ ನೀಡಿದರು.

ಸೋಮವಾರಪೇಟೆ ತಾಲೂಕಿನ ಬೆಂಗಳೂರು ಜಾಲ್ಸೂರು ರಾಜ್ಯ ಹೆದ್ದಾರಿಯ ಕಲ್ಕಂದೂರು- ತೋಳೂರುಶೆಟ್ಟಳ್ಳಿ ಮಾರ್ಗದಲ್ಲಿ 10 ಕಿ.ಮೀ. ದೂರದ 20 ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತೋಳರುಶೆಟ್ಟಳ್ಳಿ ಜಂಕ್ಷನ್‌ನಲ್ಲಿ ಭೂಮಿಪೂಜೆ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದಿನ ದಶಕಗಳಲ್ಲಿ ಹೆಚ್ಚುವರಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿರುವ ಹಿನ್ನೆಲೆಯಲ್ಲಿ ಸಮಸ್ಯೆ ಎದುರಾಗಿದೆ. ಬೆಳಗಾವಿಯಲ್ಲೂ ಇಂತಹ ಸಮಸ್ಯೆಯಿದ್ದು, ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಒಂದಷ್ಟು ವಿಳಂಬವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ರೈತಪರವಾಗಿರುವುದರಿಂದ ಅನ್ನದಾತರಿಗೆ ಆತಂಕ ಬೇಡ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮನವರಿಕೆಯಾಗಿರುವುದರಿಂದ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಲಾಗಿದೆ. ಇದಕ್ಕಿಂತ ಮೊದಲು ಕಾಂಗ್ರೆಸ್ ಸರ್ಕಾರ ಇದೇ ವರದಿ ಅನುಷ್ಠಾನಕ್ಕೆ ಅವಕಾಶ ನೀಡಿರಲಿಲ್ಲ ಎಂದು ನೆನಪಿಸಿದರು.

ಗ್ಯಾರಂಟಿಗೆ 58 ಸಾವಿರ ಕೋಟಿ ರೂ. ಮೀಸಲು: ಸರ್ಕಾರ 5 ಗ್ಯಾರಂಟಿಗಳಿಗೆ 58 ಸಾವಿರ ಕೋಟಿ ರೂ.ಹಣವನ್ನು ಮೀಸಲಿಟ್ಟಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತ್ಯೇಕ ಅನುದಾನವನ್ನು ಕಲ್ಪಿಸಲಾಗಿದೆ. ನೀರಾವರಿ ಮತ್ತು ರಸ್ತೆ ಅಭಿವೃದ್ಧಿಗೆ ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ. ಆಸ್ಪತ್ರೆ, ಶಾಲೆಗಳ ನಿರ್ಮಾಣವಾಗುತ್ತಿವೆ. ಉದ್ಯೋಗವನ್ನು ಕಲ್ಪಿಸಲಾಗುತ್ತಿದೆ. ಆದರೆ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲ ಎಂದು ಬಿಜೆಪಿಯವರು ಅರಚುತ್ತಿದ್ದಾರೆ. ಜನರು ಕೂಡ ಬಿಜೆಪಿಯವರ ಆರೋಪಕ್ಕೆ ಮಣೆ ಹಾಕಬಾರದು. ಗ್ಯಾರಂಟಿಗಳಿಂದ ಜನರು ನೆಮ್ಮದಿ ಕಾಣುತ್ತಿರುವುದು ಸರ್ಕಾರಕ್ಕೆ ಗೊತ್ತಿದೆ ಎಂದು ಹೇಳಿದರು.

ತೋಳೂರು ಶೆಟ್ಟಳ್ಳಿಯಿಂದ ಕೂತಿ ಗ್ರಾಮದ ಗಡಿಕಲ್ಲಿನವರೆಗೂ ರಸ್ತೆ ಮುಂದುವರಿದ ಕಾಮಗಾರಿಗೆ ಹೆಚ್ಚುವರಿ 5 ಕೋಟಿ ರೂ.ಗಳ ಅನುದಾನ ನೀಡಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣದ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಚುನಾವಣೆಯ ಸಂದರ್ಭದಲ್ಲೇ ಕಲ್ಕಂದೂರು, ತೋಳೂರುಶೆಟ್ಟಳ್ಳಿ, ಕೂತಿ ಗ್ರಾಮದ ರಸ್ತೆ ಅಭಿವೃದ್ಧಿ ಮಾಡವ ಭರವಸೆ ನೀಡಿದ್ದೆ. ರೈತರ ಹಲವು ದಶಕಗಳ ರಸ್ತೆ ಕನಸು ನನಸಾಗಿದೆ ಎಂದು ಹೇಳಿದರು.

ಹೆಗ್ಗಡಮನೆ, ಸುಬ್ರಮಣ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ತಾಂತ್ರಿಕ ಕಾರಣಗಳಿಂದ ನಿಂತು ಹೋಗಿದೆ. ಅಲ್ಲಿನ ರಸ್ತೆಗೂ ಅನುದಾನ ಕಲ್ಪಿಸುವಂತೆ ಮನವಿ ಮಾಡಿದರು. ಕಕ್ಕೆಹೊಳೆ, ಐಗೂರು ಸೇತುವೆ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನವನ್ನು ತರಲಾಗಿದೆ. ಸಿ ಆ್ಯಂಡ್ ಡಿ ಭೂಮಿಯ ಹಕ್ಕು ರೈತರಿಗೆ ಸಿಗಬೇಕು. ಅದಕ್ಕಾಗಿ ನಿರಂತರ ಹೋರಾಟಕ್ಕೆ ರೈತರೊಂದಿಗೆ ಭಾಗಿಯಾಗುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ, ಹಾನಗಲ್ಲು ಗ್ರಾಪಂ ಅಧ್ಯಕ್ಷ ಯಶಾಂತ್ ಕುಮಾರ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮೆಹರೋಝ್ ಖಾನ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಮುಖಂಡರಾದ ಚಂದ್ರಮೌಳಿ, ನಂದಕುಮಾರ್, ಕೆ.ಎ.ಯಾಕೂಬ್, ಚೌಡ್ಲು ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ಲೋಕೋಪಯೋಗಿ ಇಲಾಖೆಯ ಹಾಸನ ವಿಭಾಗದ ಅಧೀಕ್ಷಕ ಇಂಜಿನಿಯರ್ ಕೆ.ಎನ್.ನಳಿನಿ ಇದ್ದರು. ಗ್ರಾಮಸ್ಥರಾದ ಸಿ.ಕೆ.ಶಿವಕುಮಾರ್ ಮತ್ತು ಜಗದೀಶ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net