

ಚಿಂತಾಮಣಿ : ದೇಶದೆಲ್ಲೆಡೆ ಈಗ ತಿರುಪತಿ ಲಡ್ಡು ವಿವಾದದ ಚರ್ಚೆ ನಡೆಯುತ್ತಿವೆ. ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಇನ್ನಿತರ ಕಲಬೆರಕೆ ಪದಾರ್ಥಗಳನ್ನು ಬಳಸಲಾಗಿದೆ ಎನ್ನುವ ವಿಚಾರದಿಂದ ಎಲ್ಲರೂ ಶಾಕ್ ಆಗಿದ್ದಾರೆ. ಈ ಗೊಂದಲದ ಬೆನ್ನಲ್ಲೇ ಆಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸುದರ್ಶನ್ ಯಾದವ್ ಅವರ ಅನುಪಸ್ಥಿತಿಯಲ್ಲಿ ಶಿರಸ್ತೇದಾರ್ ರವೀಶ್ ಅವರಿಗೆ ಮನವಿ ಸಲ್ಲಿಸಲಾಯಿತು
ಪರಿಷತ್ ಅಧ್ಯಕ್ಷ ಉಮಾಶಂಕರ್ ಮಾತನಾಡಿ, ಇನ್ನು ಮುಂದೆ ತಿರುಪತಿ ಲಡ್ಡು ಪ್ರಸಾದವನ್ನು ದೇವಸ್ಥಾನಗಳಲ್ಲಿ ಬಳಸದಿರಲು ಅಖಿಲ ಕರ್ನಾಟಕ ಅರ್ಚಕರ ಸಂಘ ತೀರ್ಮಾನಿಸಿದೆ. ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಕಲಬೆರಕೆ ನಡೆದಿಲ್ಲ ಎನ್ನುವ ಬಗ್ಗೆ ಸ್ಪಷ್ಟತೆ ಸಿಗುವವರೆಗೂ ಪ್ರಸಾದವನ್ನು ಬಳಸುವುದಿಲ್ಲ ಎಂದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಿರುಪತಿಯ ಲಡ್ಡು ಪ್ರಸಾದವನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತಿತ್ತು. ಆದರೆ, ಇದೀಗ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎನ್ನುವುದನ್ನು ಕೇಳಿ ಬೇಸರವಾಗಿದೆ. ಕಲಬೆರೆಕೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಅಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ್ ರವೀಶ್, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಪರಿಷತ್‌ನ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣಾಚಾರ್, ಅನಂತಪದ್ಮನಾಭ್, ಕೋಟಗಲ್ ಮಂಜುನಾಥ್, ಸುಬ್ಬುಕೃಷ್ಣಸ್ವಾಮಿ, ಎಚ್.ಎನ್.ಸುರೇಶ್, ಶ್ರೀನಿವಾಸಚಾರ್, ಸುರೇಶ್ ಕುಮಾರ್, ಮುರಳೀಧರ್, ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.