

* ಚನ್ನಪಟ್ಟಣದಲ್ಲಿ ನಾಯಿ, ಕುದುರೆ, ದನಗಳ ಹಾವಳಿ
* ಮಕ್ಕಳು, ವೃದ್ಧರು ರಸ್ತೆಗಿಳಿಯುವುದೇ ಕಷ್ಟ
* ಕಣ್ಮುಚ್ಚಿ ಕುಳಿತ ನಗರಸಭೆ ಆಡಳಿತ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಚನ್ನಪಟ್ಟಣ ತಾಲೂಕಿನಲ್ಲಿ ಪ್ರಾಣಿಗಳ ಕಾಟ ವಿಪರೀತವಾಗಿದೆ. ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳು ಜನತೆಗೆ ಉಪಟಳ ನೀಡುತ್ತಿದ್ದರೆ, ನಗರ ಪ್ರದೇಶದಲ್ಲಿ ಬೀದಿ ನಾಯಿ, ಕುದುರೆ, ದನಗಳ ಹಾವಳಿ ತೀವ್ರವಾಗಿದೆ.
ಹೌದು.., ಚನ್ನಪಟ್ಟಣದಲ್ಲಿ ಬಿಡಾಡಿ ನಾಯಿಗಳ ಕಾಟ ಹೆಚ್ಚಾಗಿದ್ದು, ನಗರದ ಪ್ರಮುಖ ರಸ್ತೆಗಳು ಸೇರಿ ಕೆಲ ನಿರ್ಜನ ಪ್ರದೇಶದಲ್ಲಿ ಗುಂಪುಗುಂಪಾಗಿ ತಿರುಗಾಡುವ ಬೀದಿ ನಾಯಿಗಳು ಒಂಟಿಯಾಗಿ ಬರುವ ಮಕ್ಕಳು, ದ್ವಿಚಕ್ರ ವಾಹನ ಸವಾರರ ಮೇಲೆರಗುತ್ತಿವೆ. ಈ ನಾಯಿಗಳ ದಾಳಿಯಿಂದಾಗಿ ದ್ವಿಚಕ್ರವಾಹನ ಸವಾರರು ಬಿದ್ದು ಕೈಕಾಲು ಮುರಿದು ಕೊಳ್ಳುತ್ತಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ನಗರದ ಇಸ್ಲಾಂಪುರದಲ್ಲಿ ನಾಲ್ಕೂವರೆ ವರ್ಷದ ಮಗುವೊಂದರ ಮೇಲೆ ಬೀದಿನಾಯಿಗಳ ಹಿಂಡು ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದವು. ಇದೇ ಬಡಾವಣೆ ಸೇರಿ ಮಲ್ಲಯ್ಯನದೊಡ್ಡಿ ಹಾಗೂ ಹಲವೆಡೆ ನಾಯಿ ಕಚ್ಚಿ ಗಾಯಗೊಳಿಸಿದ ಹಲವು ಪ್ರಕರಣ ವರದಿಯಾಗಿದ್ದವು. ಏತನ್ಮಧ್ಯೆ ನಗರದ ಜೀವನ್‌ಪುರ ಮೊಹಲ್ಲಾದಲ್ಲಿ ಮೂರು ವರ್ಷದ ಹೆಣ್ಣು ಮಗುವೊಂದರ ಮೇಲೆ ದಾಳಿ ನಡೆಸಿರುವ ಬೀದಿನಾಯಿಗಳು, ತೀವ್ರವಾಗಿ ಗಾಯಗೊಳಿಸಿವೆ.
ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಮಕ್ಕಳು ಸೇರಿ ವೃದ್ಧರು ತುತ್ತಾಗುತ್ತಿದ್ದಾರೆ. ನಾಯಿ ಹಾವಳಿ ನಿಯಂತ್ರಿಸಬೇಕಾದ ನಗರಸಭೆ ಪ್ರಾಣಿ ದಯಾ ಸಂಘದ ನೆಪ ಹೇಳಿ ಸುಮ್ಮನಾಗಿದೆ. ಎಬಿಸಿ (ಅನಿಮಲ್ ಬರ್ತ್ ಕಂಟ್ರೋಲ್) ಯೋಜನೆಯಡಿ ನಾಯಿಗಳ ಸಂತಾನ ಶಕ್ತಿ ಹರಣ ಶಸ ಚಿಕಿತ್ಸೆಗೆ ಟೆಂಡರ್ ಕರೆದರೂ ಯಾವ ಬಿಡ್‌ದಾರರೂ ‘ಭಾಗವಹಿಸುತ್ತಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಬೀದಿನಾಯಿಗಳ ಹಾವಳಿಯಿಂದ ಕಂಗಾಲಾಗಿರುವ ನಗರದ ನಿವಾಸಿಗಳು, ಈ ಸಮಸ್ಯೆಗೆ ಮುಕ್ತಿ ಯಾವಾಗ? ಎಂದು ಹಿಡಿಶಾಪ ಹಾಕುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಬೀದಿನಾಯಿಯಷ್ಟೇ ಅಲ್ಲದೇ ಬಿಡಾಡಿ ಪ್ರಾಣಿಗಳ ಹಾವಳಿ ಜೋರಾಗಿದೆ. ಬಿಡಾಡಿ ಹಸುಗಳು, ನಾಯಿಗಳು, ಕೋತಿಗಳು, ಹಂದಿಗಳು ಹಾಗೂ ಕುದುರೆಗಳ ಉಪಟಳ ತೀವ್ರವಾಗಿದೆ. ಹಲವು ಬಡಾವಣೆಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದರೆ, ಕೆಲ ಬಡಾವಣೆಗಳಲ್ಲಿ ಕೋತಿಗಳ ಕಾಟ ವಿಪರೀತ. ಇನ್ನೂ ಕೆಲವೆಡೆ ಬಿಡಾಡಿ ಕುದುರೆಗಳು ಗುಂಪು ಗುಂಪಾಗಿ ರಸ್ತೆಯಲ್ಲಿ ಸಂಚರಿಸುವುದು, ರಸ್ತೆ ತುಂಬಾ ನಿಲ್ಲುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಾರು ಮತ್ತು ಬೈಕ್‌ಗಳಿಗೆ ಕುದುರೆಗಳು ಅಡ್ಡ ಬಂದು ಸಾಕಷ್ಟು ಸಮಸ್ಯೆ ಸೃಷ್ಟಿ ಎದುರಿಸುವಂತಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಸೇರಿ ನಗರದ ಪ್ರಮುಖ ವಾಣಿಜ್ಯ ಪ್ರದೇಶ ಎನಿಸಿರುವ ಎಂಜಿ ರಸ್ತೆಯಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ.
ನಾಯಿಗಳ ಸಂತಾನ ಶಕ್ತಿ ಹರಣ ಶಸ ಚಿಕಿತ್ಸೆಗೆ ಸಾಕಷ್ಟು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ, ಯಾರೂ ‘ಭಾಗವಹಿಸಿರಲಿಲ್ಲ. ಈಗ, ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಬೀದಿನಾಯಿಗಳ ಹಾವಳಿ ತಡೆಗಟ್ಟುವುದಕ್ಕೆ ನಗರಸಭೆಯಿಂದ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತೇವೆ. ಮಹೇಂದ್ರ, ಪೌರಾಯುಕ್ತ ಚನ್ನಪಟ್ಟಣ ನಗರಸಭೆ .
ಕೋಟ್-2
ನಗರದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಗುಂಪುಗುಂಪಾಗಿ ಬರುವ ನಾಯಿಗಳು ಮಕ್ಕಳು ಸೇರಿ ದೊಡ್ಡವರ ಮೇಲೆ ಎರಗಿ ಗಾಯಗೊಳಿಸುತ್ತಿವೆ. ರಸ್ತೆಯಲ್ಲಿ ಓಡಾಡುವುದಕ್ಕೆ ಭಯದ ವಾತಾವರಣ ನಿರ್ಮಾಣವಾಗಿದೆ. ನಾಯಿಗಳ ಹಾವಳಿಯನ್ನು ತಡೆಗಟ್ಟಲು ನಗರಸಭೆ ವಿಫಲವಾಗಿದೆ. ನಗರವಾಸಿಗಳ ಹಿತಕ್ಕಾಗಿ ಈ ಕೂಡಲೇ ನಗರಸಭೆ ಕ್ರಮ ಕೈಗೊಳ್ಳಬೇಕು.
ಶ್ಯಾಮ್, ಚರ್ಚ್ ರಸ್ತೆ ನಿವಾಸಿ