

ತುಮಕೂರು: ಲೋಕ ಸಮರದ ನಡುವೆ ವೀರಶೈವ-ಲಿಂಗಾಯತ ಸಮುದಾಯದ ಪ್ರಬಲ ನಾಯಕ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ್ದು ಜಿಲ್ಲಾ ಕಾಂಗ್ರೆಸ್‌ಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ತಿಪಟೂರು ವಿಧಾನಸಭಾ ಕ್ಷೇತ್ರದ ಮುಂಚೂಣಿ ನಾಯಕ, ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಪ್ರಾಥಮಿಕ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ರಾಜೀನಾಮೆ ಪತ್ರ ರವಾನಿಸಿದ್ದು ಈ ಪತ್ರದಲ್ಲಿ ತಿಪಟೂರು ಶಾಸಕರ ಧೋರಣೆ, ಅಹಂಕಾರದ ವರ್ತನೆ, ಕಾರ್ಯಕರ್ತರ ಕಡೆಗಣನೆಗೆ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಅಸಮಾಧಾನ ಹೊರಹಾಕಿದ್ದಾರೆ.
ಕೆಜೆಪಿ-ಬಿಜೆಪಿ-ಜೆಡಿಎಸ್ ಎಲ್ಲಾ ಪಕ್ಷಗಳನ್ನು ಸುತ್ತಾಡಿದ್ದ ಲೋಕೇಶ್ವರ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಒಂದು ಕಡೆ ನೆಲೆ ಕಂಡುಕೊಳ್ಳದ ಲೋಕೇಶ್ವರ್ ಮುಂದಿನ ನಡೆ ಎತ್ತಕಡೆ ಎಂಬುದು ಕುತೂಹಲ ಮೂಡಿಸಿದೆ.
ಇತ್ತೀಚೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್.ನಿಂಗಪ್ಪ ಸಹ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಮರಳಿದ್ದರು.
ಈ ಮಧ್ಯೆ ದೋಸ್ತಿಗಳಿಗೆ ಆಘಾತ ನೀಡಲು ಕಾಂಗ್ರೆಸ್ ಸಹ ರಿವರ್ಸ್ ಆಪರೇಷನ್ ನಡೆಸಿತ್ತು. ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜುರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಲೋಕ ಸಮರದ ನಡುವೆ ರಾಜಕೀಯ ತಂತ್ರಗಾರಿಕೆ ಮೆರೆದಿತ್ತು.