

ಬಾಗಲಕೋಟೆ: ಟೈರ್ ಬ್ಲಾಸ್ಟ್ ನಿಂದ ಟಿಪ್ಪರ್ ಪಲ್ಟಿಯಾಗಿ ಬಿದ್ದು ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ದುರ್ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತರನ್ನು ಬಾದರದಿನ್ನಿ ಗ್ರಾಮದ ವೆಂಕಪ್ಪ ಶಿವಪ್ಪ ತೋಳಮಟ್ಟಿ (70), ಆತನ ಪತ್ನಿ ಯಲ್ಲವ್ವ ವೆಂಕಪ್ಪ ತೋಳಮಟ್ಟಿ (60), ಪುತ್ರ ಪುಂಡಲೀಕ್ ವೆಂಕಪ್ಪ ತೋಳಮಟ್ಟಿ(35), ಮಗಳು, ಗಿರಿಸಾಗರ ಗ್ರಾಮದ ನಾಗವ್ವ ಅಶೋಕ ಬಮ್ಮಣ್ಣವರ (40) ಹಾಗೂ ಅಳಿಯ ಅಶೋಕ ನಿಂಗಪ್ಪ ಬಮ್ಮಣ್ಣವರ (45) ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ವೆಂಕಪ್ಪ ಕುಟುಂಬದವರು ಭಾನುವಾರ ತಮ್ಮ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಸಂಜೆ ವಾಪಸ್ಸು ನಡೆದುಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಬರುತ್ತಿದ್ದ ಗರಸು ತುಂಬಿದ್ದ ಟಿಪ್ಪರ್ ಮುಂದಿನ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಲ್ಲಿಯೇ ರಸ್ತೆ ಬದಿಗೆ ನಡೆದುಕೊಂಡು ಹೋಗುತ್ತಿದ್ದ ಈ ಐವರ ಮೇಲೆ ಗರಸು (ಮಣ್ಣು) ಬಿದ್ದು, ವಾಹನ ಬಡಿದು ಐವರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರಾನಾಥ್ ರೆಡ್ಡಿ, ಎಎಸ್ಪಿ ಪ್ರಸನ್ನ ದೇಸಾಯಿ, ಬೀಳಗಿ ಠಾಣೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಬಿದ್ದಿದ್ದ ಟಿಪ್ಪರನ್ನು ನಿಲ್ಲಿಸಿ, ಮೃತಪಟ್ಟಿದ್ದ ಐವರ ಶವಗಳನ್ನು ಹೊರಗೆ ತೆಗೆದು ಬೀಳಗಿ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದಾರೆ.
ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಬಾದರದಿನ್ನಿ ಗ್ರಾಮದ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಸ್ಥಳದಲ್ಲಿ ಸೇರಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಸ್ವಲ್ಪ ಹೊತ್ತು ಕಳೆದಿದ್ದರೆ ಎಲ್ಲರೂ ಮನೆ ಸೇರಿಕೊಳ್ಳುತ್ತಿದ್ದರು. ಅಷ್ಟರಲ್ಲೇ ಟಿಪ್ಪರ್ ಮೂಲಕ ಬಂದು ಒಂದೇ ಕುಟುಂಬದ ಐವರನ್ನು ಬಲಿ ತೆಗೆದುಕೊಂಡು ಬಿಟ್ಟನಲ್ಲ ಪಾಪಿ ಜವರಾಯ ಎಂದು ಸೇರಿದ್ದ ಜನರು ಹಿಡಿಶಾಪ ಹಾಕುತ್ತಿದ್ದರು.
ಹಾಗೆಯೇ ಚಾಲಕನ ವಿರುದ್ಧವೂ ಆಕ್ರೋಶದ ಮಾತುಗಳು ಕೇಳಿ ಬರುತ್ತಿದ್ದವು. ಪೊಲೀಸರು ಜನರನ್ನು ನಿಯಂತ್ರಿಸುವುದು ಹಾಗೂ ಆಕ್ರೋಶಗೊಂಡಿದ್ದ ಜನರನ್ನು ಸಮಾಧಾನಿಸಲು ಹರಸಾಹಸ ಪಡುತ್ತಿದ್ದಾರೆ.
ನಡೆದ ದುರ್ಘಟನೆ ಬಗ್ಗೆ ಹಾಗೂ ಮೃತರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸ್ಥಳೀಯರಿಂದ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.