ನಿತ್ಯ ಯೋಗ, ಧ್ಯಾನಕ್ಕೆ ಸಮಯ ಮೀಸಲಿಡಿ

11
Published on

ಹೊಳೆನರಸೀಪುರ: ಪ್ರತಿಯೊಬ್ಬ ವ್ಯಕ್ತಿಗೂ ಒಂದಿಲ್ಲೊಂದು ಸಮಸ್ಯೆ ಇರುತ್ತದೆ. ಸಮಸ್ಯೆಗಳನ್ನು ಎದುರಿಸಿ ಗೆಲ್ಲುವುದೇ ನಿಜವಾದ ಜೀವನ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ವಿಚಕ್ಷಣಾಧಿಕಾರಿ ಕೆ.ಆರ್.ಶ್ರೀನಿವಾಸ್ ಹೇಳಿದರು.


ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಮಾನಸಿಕ ಆರೋಗ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾನಸಿಕವಾಗಿ ಆರೋಗ್ಯವಾಗಿದ್ದರೆ ಏನನ್ನಾದರೂ ಸಾಧಿಸಬಹುದು. ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಯೋಗ, ಪ್ರಾಣಾಯಾಮ, ಧ್ಯಾನ, ಸಾತ್ವಿಕ ಆಹಾರ ಸೇವನೆ ಅಭ್ಯಾಸ ಮಾಡಿಕೊಳ್ಳಿ. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ 1 ಗಂಟೆಯನ್ನು ವ್ಯಾಯಾಮ, ಯೋಗ, ಧ್ಯಾನಕ್ಕೆ ಮೀಸಲಿಡಿ. ಹೀಗಿದ್ದರೆ ನಿಮ್ಮ ಮನಸ್ಸು ನೀವು ಹೇಳಿದ್ದನ್ನು ಕೇಳುತ್ತದೆ. ಇಲ್ಲದಿದ್ದರೆ ನಿಮ್ಮ ಮನಸ್ಸು ಹೇಳುವುದನ್ನು ನೀವು ಕೇಳಿ ನಿಮ್ಮ ಬದುಕನ್ನು ಉತ್ತಮವಾಗಿ ಸಾಗಿಸದಂತೆ ಮಾಡುತ್ತದೆ ಎಂದು ಹೇಳಿದರು.


ಪತಂಜಲಿ ಯೋಗಕೂಟದ ಶಿಕ್ಷಕ ಗಣೇಶ್ ಬಾಬು ಮಾತನಾಡಿ, ದೈಹಿಕ ಆರೋಗ್ಯಕ್ಕೆ ಯೋಗ, ಮಾನಸಿಕ ಆರೋಗ್ಯಕ್ಕೆ ಧ್ಯಾನ ಮುಖ್ಯ. ವ್ಯಾಯಾಮ ದೇಹಕ್ಕೆ ಆರೋಗ್ಯ ನೀಡಿದರೆ, ಧ್ಯಾನ ಮನಸ್ಸು ಮತ್ತು ಮೆದುಳಿನ ಆರೋಗ್ಯ ಕಾಪಾಡುತ್ತದೆ. ಆದ್ದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ವ್ಯಾಯಾಮ ಮಾಡಿ, ಮನಸ್ಸನ್ನು ನಿಯಂತ್ರಣದಲ್ಲಿಡಲು ಧ್ಯಾನ ಮಾಡಿ ಎಂದರು.


ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ, ಪ್ರಭಾರ ಪ್ರಾಂಶುಪಾಲ ಅಶೋಕ್, ಯೋಗಪಟು ಲೋಕೇಶ್, ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಹಡಪದ, ನರ್ಸಿಂಗ್ ಕಾಲೇಜು ಉಪನ್ಯಾಸಕಿ ಶೈಲಜಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net