

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಅಕ್ರಮ ಪ್ರಕರಣಕ್ಕೆ ಇದೀಗ ಜಾರಿ ನಿರ್ದೇಶನಾಲಯ(ಇ.ಡಿ.)ಅಧಿಕೃತ ಎಂಟ್ರಿ ಕೊಟ್ಟಿದೆ. ಶುಕ್ರವಾರ ಇ.ಡಿ. ಅಧಿಕಾರಿಗಳ ತಂಡ ಮುಡಾ ಹಾಗೂ ತಾಲೂಕು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ, ದಾಖಲೆಗಳನ್ನು ಕಲೆ ಹಾಕಿರುವುದಾಗಿ ತಿಳಿದು ಬಂದಿದೆ. ಇತ್ತ ಬೆಂಗಳೂರಿನಲ್ಲಿ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಮನೆಯನ್ನೂ ಇ.ಡಿ. ತಂಡ ಶೋಧಿಸಿದೆ.
ಎರಡು ದಿನ ತನಿಖೆ: ಇ.ಡಿಯ 20 ಅಧಿಕಾರಿಗಳ ತಂಡ ಬೆಳಗ್ಗಿನಿಂದ ಸಂಜೆಯವರೆಗೆ ಮುಡಾ ಕಚೇರಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿತು. ಪ್ರಾಧಿಕಾರ ಕಾನೂನು ಮೀರಿ ಕಾರ್ಯನಿರ್ವಹಿಸಿದೆಯೇ ಎಂದು ತಿಳಿದುಕೊಳ್ಳಲು ಮುಡಾದ ಕಾರ್ಯವ್ಯಾಪ್ತಿ ಹಾಗೂ ಕಾನೂನುಗಳ ಕುರಿತು ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸಿದರು. ಇದಾದ ಬಳಿಕ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದ್ದಾರೆ. ಮುಡಾದಲ್ಲಿ ಒಂದು ತಂಡ ತನಿಖೆ ನಡೆಸುತ್ತಿದ್ದರೆ ಮತ್ತೊಂದು ತಂಡ ತಾಲೂಕು ಕಚೇರಿ ಮೇಲೆ ದಾಳಿ ನಡೆಸಿ ಸಿಎಂ ಕುಟುಂಬದ ಆಸ್ತಿ ಕುರಿತ ಮಾಹಿತಿ ಕಲೆ ಹಾಕಿತು. ಶನಿವಾರವೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲಿದೆ ಎಂದು ಗೊತ್ತಾಗಿದೆ.
ಬಿಗಿ ಬಂದೋಬಸ್ತ್: ದಾಳಿ ಹಿನ್ನೆಲೆಯಲ್ಲಿ ಮುಡಾ ಹಾಗೂ ತಾಲೂಕು ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಸಿಆರ್ಪಿಎಫ್ ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಸಾಕಷ್ಟು ಜನರು ಕೆಲಸ ಕಾರ್ಯಕ್ಕೋಸ್ಕರ ಕಚೇರಿಗೆ ಆಗಮಿಸಿ ಹಿಂತಿರುಗಿದರು.
ಆಡಳಿತ ಮಂಡಳಿ ವಿಸರ್ಜನೆ?: ಮುಡಾ ಹಗರಣ ಹಿನ್ನೆಲೆಯಲ್ಲಿ ಮುಡಾ ಆಡಳಿತ ಮಂಡಳಿಯನ್ನು ವಿಸರ್ಜಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಇದಕ್ಕೆ ಪೂರಕವಾಗಿ ಮುಡಾ ಅಧ್ಯಕ್ಷ ಕೆ. ಮರಿಗೌಡ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಮುಡಾದಲ್ಲಿ ಇನ್ನು ಮುಂದೆ ಹಗರಣಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊ ಳ್ಳುವ ಉದ್ದೇಶದಿಂದ ಮುಡಾಗೆ ದಕ್ಷ ಅಧಿಕಾರಿಯನ್ನು ನೇಮಿಸಲು ಉದ್ದೇಶಿಸಲಾಗಿದ್ದು, ಅ.25ರಂದು ನಡೆಯುವ ಸಚಿವ ಸಂಪುಟ ಸಭೆ ಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಹಗರಣದ ತನಿಖೆ ಮುಗಿ ಯುವವರೆಗೆ ಆಡಳಿತ ಮಂಡಳಿ ವಿಸರ್ಜನೆ ಮಾಡುವ ಸಾಧ್ಯತೆ ಇದೆ.
ಇ.ಡಿ.ಎಂಟ್ರಿ ಏಕೆ?: ಸಿಎಂ ಸಿದ್ದರಾಮಯ್ಯ ಕುಟುಂಬ ಮುಡಾದಲ್ಲಿ ಬಹುಕೋಟಿ ಹಗರಣ ನಡೆಸಿದ್ದು, ತನಿಖೆ ನಡೆಸಿ ಹಗರಣ ಬಯಲಿಗೆ ಎಳೆಯಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಇದಕ್ಕೆ ಪೂರಕವಾಗಿ 500 ಪುಟಗಳ ದಾಖಲೆಗಳನ್ನು ಸಲ್ಲಿಸಿದ್ದರು. ಅದನ್ನು ವಿವರವಾಗಿ ಪರಿಶೀಲಿಸಿದ ನಂತರ ಇ.ಡಿ. ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿತ್ತು. ನಂತರ ಮುಡಾಗೆ ನೋಟಿಸ್ ಜಾರಿ ಮಾಡಿ ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆ ಒದಗಿಸುವಂತೆ ನಿರ್ದೇಶನ ನೀಡಿತ್ತು. ಇದೀಗ ಕಾರ್ಯಾಚರಣೆ ಆರಂಭಿಸಿದೆ.
ವೈಟ್ನರ್ ಮೂಲ ಪ್ರತಿ ಶೋಧ: ಸಿಎಂ ಪತ್ನಿ ಪಾರ್ವತಿ ಅವರಿಗೆ ಸೇರಿದ ಕೆಸರೆಯಲ್ಲಿರುವ 3.16 ಎಕರೆ ಜಾಗವನ್ನು ದೇವನೂರು ಬಡಾವಣೆ ನಿರ್ವಣಕ್ಕಾಗಿ ಮುಡಾ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರವಾಗಿ ಬದಲಿ ನಿವೇಶನ ಕೋರಿ ಪಾರ್ವತಿ ಮುಡಾಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಪಾರ್ವತಿ ವಿಜಯನಗರ 3ನೇ ಹಂತದಲ್ಲಿ ಬದಲಿ ನಿವೇಶನ ನೀಡಲು ಮನವಿ ಮಾಡಿದ್ದಾರೆಂದು ದೂರುದಾರ ಆರೋಪಿಸಿದ್ದರು. ಹಗರಣ ಬಯಲಿಗೆ ಬಂದ ನಂತರ ಬದಲಿ ನಿವೇಶನ ಕೋರಿಕೆಯ ಪತ್ರದ 2ನೇ ಪುಟದಲ್ಲಿ ವೈಟ್ನರ್ ಹಚ್ಚಲಾಗಿದೆ ಎಂದು ದೂರುದಾರ ಆರೋಪಿಸಿದ್ದರು. ಇಡಿ ಅಧಿಕಾರಿಗಳು ದಾಖಲೆ ಬಯಸಿದ ಸಂದರ್ಭ ಮುಡಾ ಅಧಿಕಾರಿಗಳು ದೃಢೀಕೃತ ನಕಲು ಪ್ರತಿ ನೀಡಿದರು. ಆದರೆ, ಅಧಿಕಾರಿಗಳು ಮೂಲ ಪ್ರತಿ ತರಿಸಿಕೊಂಡು ಪರಿಶೀಲಿಸಿದರು. ವೈಟ್ನರ್ ಹಚ್ಚಿರುವ ಜಾಗದಲ್ಲಿ ಏನು ಬರೆಯಲಾಗಿದೆ ಎಂದು ಮುಡಾ ಆಯುಕ್ತರು, ಅಧಿಕಾರಿಗಳನ್ನು ಪ್ರಶ್ನಿಸಿದರು. ‘ನಾನು ಬರುವ ಮುಂಚೆಯೇ ಪಾರ್ವತಿ ಬದಲಿ ನಿವೇಶನ ಕೋರಿ ಸಲ್ಲಿಸಿದ್ದ ಪತ್ರದಲ್ಲಿ ವೈಟ್ನರ್ ಇತ್ತು’ ಎಂದು ಮುಡಾ ಆಯುಕ್ತ ರಘುನಂದನ್ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಈ ಹಿಂದಿನ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಮುಡಾದಲ್ಲಿ ಅವ್ಯವಹಾರ ನಡೆದಿದ್ದು, ವಿಸõತ ತನಿಖೆ ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಬರೆದಿರುವ ಪತ್ರದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ.
ಬೆಂಗಳೂರಿನಲ್ಲೂ ದಾಳಿ: ಬೆಂಗಳೂರಿನ ಕೆಂಗೇರಿಯಲ್ಲಿರುವ ಪ್ರಕರಣದ 4ನೇ ಆರೋಪಿ ದೇವರಾಜು ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಸಂಗ್ರಹಿಸಿದ್ದಾರೆ. ಕೆಸರೆಯಲ್ಲಿ 3.16 ಎಕರೆ ಜಾಗವನ್ನು ದೇವರಾಜು ಸಿಎಂ ಸಿದ್ದರಾಮಯ್ಯ ಭಾವಮೈದá-ನ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ದರು. ನಂತರ ಮಲ್ಲಿಕಾರ್ಜುನ ಸ್ವಾಮಿ ಆ ಜಾಗ ವನ್ನು ಸಹೋದರಿ, ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ನೀಡಿದ್ದರು. ಪ್ರಕರಣದ ಮೂಲ ದೇವರಾಜುವಿನಿಂದ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ದೇವರಾಜು ಮನೆ ಮೇಲೆ ದಾಳಿ ನಡೆದಿದೆ.
ಇ.ಡಿ. ದಾಖಲೆಗಳನ್ನು ಪರಿಶೀಲಿಸಲಿ, ಅಭ್ಯಂತರವೇನಿಲ್ಲ. ಕಾನೂನು ಹೋರಾಟ ನಡೆಸುತ್ತೇವೆ. ಇ.ಡಿ.ದಾಳಿಗೆ ಹೆದರುವುದಿಲ್ಲ.
| ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಕೇಂದ್ರ ಸರ್ಕಾರಕ್ಕೆ ಇಡಿ, ಐಟಿ ಅಸ್ತ್ರ ಎನ್ನುತ್ತಾರೆ. ಹಾಗಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಎಸ್ಐಟಿ ಅಸ್ತ್ರವಾಗಿದೆ. ಎಸ್ಐಟಿ ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಶನ್ ಟೀಮ್ ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಮ್
| ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನದಿಂದ ನಡೆದುಕೊಳ್ಳುತ್ತಿದ್ದಾರೆ. ಅವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಲಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಗೌರವಯುತವಾಗಿ ರಾಜೀನಾಮೆ ಸಲ್ಲಿಸಬೇಕು.
| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಮುಡಾ ಹಗರಣದಲ್ಲಿ ಸಿಎಂ ಕುಟುಂಬವೇ ಭಾಗಿಯಾಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆ ಅರಿತು ಇಡಿ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಬೇಕು.
| ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದ
ಇ.ಸಿ.ಐ.ಆರ್. ಮಾಡಿದ ಮೇಲೆ ದಾಖಲೆ ಕೇಳುವ ಅಧಿಕಾರವಿದೆ. ಇ.ಡಿ.ಯವರಿಗೆ ಅಧಿಕಾರ ವ್ಯಾಪ್ತಿ ಏನೆಂದು ಗೊತ್ತಿದೆ. ಕಾನೂನು ಪ್ರಕಾರ ಇ.ಡಿ.ನೋಟಿಸ್ ಕೊಟ್ಟಾಗ ನಾನು ಉತ್ತರಿಸಲೇಬೇಕಾ ಗುತ್ತದೆ. ಇ.ಡಿ.ಯವರು ನನಗೇನೂ ಶತ್ರುಗಳಲ್ಲ. ಮುಡಾ ವಿಚಾರಣಾ ಆಯೋಗಕ್ಕೆ ಮುಡಾದವರು 8 ಲಕ್ಷ ಕಡತಗಳನ್ನು ನೀಡಿದ್ದಾರೆ. ಇ.ಡಿ. ಕೇಳಿದರೂ 8 ಲಕ್ಷ ಕಡತ ಕೊಡುತ್ತಾರೆ.
| ಬೈರತಿ ಸುರೇಶ್ ನಗರಾಭಿವೃದ್ಧಿ ಸಚಿವ
ಕಾನೂನು ಹೋರಾಟಕ್ಕೆ ಜಯ ದೊರೆಯುತ್ತಿದೆ. ಈ ಹಗರಣ ಇಡಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ, ಇಡಿ ಪ್ರಕರಣ ದಾಖಲಿಕೊಂಡು ದಾಳಿ ನಡೆಸಿರುವುದು ನನ್ನ ಹೋರಾಟಕ್ಕೆ ಜಯ ದೊರೆತಿದೆ.
| ಸ್ನೇಹಮಯಿ ಕೃಷ್ಣ ದೂರುದಾರ
ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂಬುದು ಆಶ್ಚರ್ಯದ ವಿಚಾರವೇನೂ ಅಲ್ಲ. ಆದರೆ, ಇಡಿಗೆ ತನಿಖೆ ನಡೆಸಲು ಹಗರಣಕ್ಕೆ ಸಂಬಂಧಿಸಿದ ಕಡತಗಳೇ ಇಲ್ಲ. ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್ನಲ್ಲಿ ಬಂದು ಹಗರಣಕ್ಕೆ ಸಂಬಂಧಿಸಿದ ಎಲ್ಲ ಕಡತ ಕೊಂಡೊಯ್ದಿದ್ದಾರೆ. ಆದರೆ, ತನಿಖೆ ವೇಳೆಯಲ್ಲಿ ಕಡತ ಎಲ್ಲಿದೆ ಎಂಬುದು ಬಯಲಿಗೆ ಬರಲಿದೆ. ಸಚಿವ ಭೈರತಿ ಸುರೇಶ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿ ಮೇಲೆ ದಾಳಿ ನಡೆಸಿದರೆ ಸತ್ಯಾಂಶ ಬಯಲಿಗೆ ಬರಲಿದೆ.
| ಟಿ.ಎಸ್. ಶ್ರೀವತ್ಸ ಶಾಸಕ