

Tigers death: ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಸಾವಿನ ಬಗ್ಗೆ ಪರಿಸರ ತಜ್ಞರು ತಕರಾರು ಎತ್ತಿದ್ದು, ಹುಲಿಗಳ ಸಾವಿನ ಹಿಂದೆ ಹಿರಿಯ ಅಧಿಕಾರಿಗಳ ಕರ್ತವ್ಯ ಲೋಪವಿದೆ ಎಂದು ಹೇಳುತ್ತಿದ್ದಾರೆ.
ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಹಾಗೂ ಪರಿಸರವಾದಿ ಜೋಸೆಫ್ ಹೂವಾರ್ ಈ ಕುರಿತು ಮಾತನಾಡಿ, ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ಮೀಣ್ಯಂ ಬಳಿ ಐದು ಹುಲಿಗಳ ಸಾಮೂಹಿಕ ಸಾವಿನ ಬಗ್ಗೆ ಅನುಮಾನದ ಜತೆಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಆರೋಪ ಮಾಡಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ದಿನಗೂಲಿ ನೌಕರರಾಗಿರುವವರಿಗೆ ಸರಿಯಾಗಿ ವೇತನವಾಗದೇ ಇರುವ ಹಿನ್ನಲೆಯಲ್ಲಿ ಕಾಡು ಕಾಯಲು ಸಿಬ್ಬಂದಿ ಸರಿಯಾಗಿ ಕೆಲಸ ಮಾಡಿಲ್ಲ. ಇವರಿಗೆ ವೇತನ ಪಾವತಿಸಲು ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯತನವಾಗಿದೆ. ಈ ಪರಿಣಾಮವಾಗಿ ಕಾಡು ಪ್ರಾಣಿ ಬೇಟೆಯಾಡಲು ಕಳ್ಳ ಬೇಟೆಗಾರರು ಯತ್ನಿಸಿರಬಹುದು ಎಂದಿದ್ದಾರೆ.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ದಿನಗೂಲಿ ನೌಕರರಿಗೆ ಸರಿಯಾಗಿ ವೇತನ ಪಾವತಿಸಿದ್ದರೆ ಅವರು ಕಾಡು ಕಾಯುವ ಕಾಯಕ ಮಾಡುತ್ತಿದ್ದರು. ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಈ ಹಿಂದೆ ಕರ್ತವ್ಯ ಲೋಪದಡಿಯಲ್ಲಿ ಅಮಾನತ್ತುಗೊಂಡಿದ್ದರು. ಅವರನ್ನು ಇಲ್ಲಿಗೆ ನಿಯೋಜಿಸಿದ್ದೇ ಸರ್ಕಾರದ ತಪ್ಪಿನ ನಡೆಯಾಗಿದೆ ಎಂದು ಜೋಸೆಫ್ ಹೂವಾರ್ ಹೇಳಿದ್ದಾರೆ.
ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿರುವವರಿಗೆ ಸರಿಯಾದ ವೇಳೆಗೆ ವೇತನ ಪಾವತಿಸುವಲ್ಲಿ ಡಿಸಿಎಫ್ ವಿಫಲರಾದರೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕಿತ್ತು. ಅವರು ಸಹ ವಿಳಂಬ ನೀತಿ ಮಾಡಿದ್ದಾರೆ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯ ತನ ಹೆಚ್ಚಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.