

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ಸಂಜೆ ಬಿಳಿಗಿರಿ ರಂಗನಾಥಸ್ವಾಮಿ ದೇಗುಲದ ಸಮೀಪದ ಕಮರಿ ಬಳಿಯ ಕಲ್ಲಿನ ಬಂಡೆಯಲ್ಲಿ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಲವು ಕಡೆ ಅರಣ್ಯ ಇಲಾಖೆ ವತಿಯಿಂದ ಕ್ಯಾಮರಾ ಅಳವಡಿಸಲಾಗಿದೆ. ಜನರು ಮುನ್ನಚ್ಚರಿಕೆ ಕ್ರಮವನ್ನು ವಹಿಸಬೇಕು ಎಂದು ಅರಣ್ಯ ಇಲಾಖೆಯ ಯಳಂದೂರು ವಲಯದ ಆರ್‌ಎಫ್‌ಒ ಸತೀಶ್ ಸೂಚಿಸಿದ್ದಾರೆ.
ಅರಣ್ಯ ಇಲಾಖೆ ವತಿಯಿಂದ ಬಿಳಿಗಿರಿರಂಗನಬೆಟ್ಟದ ದೇವಸ್ಥಾನದ ಸಮೀಪ ಕಾಣಿಸಿಕೊಂಡಿರುವ ಹುಲಿಯು ಇಲ್ಲಿನ ಬಂಗ್ಲೆಪೋಡು, ಜನತಾ ಕಾಲನಿ, ಹೊಸಪೋಡು ಸೇರಿದಂತೆ ಸುತ್ತಮುತ್ತಲ್ಲಿನಲ್ಲೇ ಆಡ್ಡಾಡುತ್ತಿದೆ. ಇಲ್ಲಿನ ನಿವಾಸಿಗಳು ಒಂಟಿಯಾಗಿ ಯಾರು ತೆರಳಬಾರದು. ರಾತ್ರಿ ವೇಳೆ ಒಬ್ಬರೇ ಮನೆಯಿಂದ ಹೊರಗಡೆ ಬರಬಾರದು, ರಸ್ತೆಯಲ್ಲಿ ಸಂಚರಿಸಬಾರದು, ಸಂಜೆ ಹೊತ್ತಲ್ಲಿ ದೇಗುಲದ ಸಮೀಪ ಇರುವ ಕಮರಿ ಬಳಿ ತೆರಳಬಾರದು ಎಂದು ಜಾಗೃತಿ ಮೂಡಿಸಲಾಗಿದೆ.
ಹುಲಿ ಹೆಣ್ಣು ಅಥವಾ ಗಂಡು ಎಂದು ತಿಳಿಯಲು, ಇದರ ಸಾಮರ್ಥ್ಯ ಹಾಗೂ ವರ್ಷ ತಿಳಿದುಕೊಳ್ಳಲು ಅರಣ್ಯ ಪ್ರದೇಶದ 10 ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ವತಿಯಿಂದ ಹೆಚ್ಚಿನ ಗಸ್ತು ಇರುವಂತೆ ನೋಡಿಕೊಳ್ಳಲಾಗಿದೆ. ಇದು ಹುಲಿ ಸ್ಥಿತಿ, ಗತಿಯ ಬಗ್ಗೆ ತಿಳಿಯಲು ಸಹಕಾರಿಯಾಗಲಿ ಎಂದು ಆರ್‌ಎಫ್‌ಒ ಸತೀಶ್ ಮಾಹಿತಿ ನೀಡಿದ್ದಾರೆ.