

ಬೇಲೂರು: ಕಾಡಾನೆಗಳ ಉಪಟಳದಿಂದ ಜನರು ನರಳುತ್ತಿರುವ ಸಂದರ್ಭದಲ್ಲೇ ತಾಲೂಕಿನ ಶಿರಗುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿರುವುದು ಈ ಭಾಗದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಶಿರಗುರ ಗ್ರಾಮ ಸೇರಿದಂತೆ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಬೆಳೆನಾಶ ಮಾಡುವುದಲ್ಲದೆ, ಜನರನ್ನು ಕಂಡರೆ ಅಟ್ಟಾಡಿಸುತ್ತಿವೆ. ಆನೆಗಳ ಉಪಟಳದಿಂದ ಜನರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಆಚೆ ಬಾರದಂತಾಗಿದೆ. ಎಲ್ಲಾದರೂ ಹೋಗಿ ಬರಬೇಕೆಂದರೆ ಗುಂಪು ಗುಂಪಾಗಿ ಮಾಹಿತಿ ಪಡೆದು ಹೋಗುವಂತಾಗಿದೆ. ಇದರ ನಡುವೆಯೇ ಈಗ ಶಿರಗುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿರುವುದು ಈ ಭಾಗದ ಸಾಕಷ್ಟು ಗ್ರಾಮಗಳ ಜನರಲ್ಲಿ ಆತಂಕದೊಂದಿಗೆ ಪ್ರಾಣಭಯ ಕಾಡತೊಡಗಿದೆ.
ಈಗ ಉತ್ತಮ ಮಳೆಯಿಂದಾಗಿ ಜಮೀನುಗಳಲ್ಲಿ ಕೆಲಸ ಮಾಡಲು ರೈತರು ತೆರಳಬೇಕು. ಆದರೆ ಇಲ್ಲಿನ ಹೆಜ್ಜೆ ನೋಡಿದರೆ ಬೃಹತ್ ಗಾತ್ರದ ಹುಲಿ ಇರಬಹುದು ಎನ್ನುತ್ತಾರೆ ಗ್ರಾಮಸ್ಥರು. ಜತೆಗೆ ಕೆಲ ದಿನಗಳ ಹಿಂದೆ ಪಕ್ಕದ ಮೂಡಿಗೆರೆ ತಾಲೂಕಿನ ಗೋಣಿಬೀಡು ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಹುಲಿ ಸಂಚರಿಸಿ ಮೂರ್ನಾಲ್ಕು ದನ ಕರುಗಳನ್ನು ಗಾಯಗೊಳಿಸಿದೆ.
ಇದೀಗ ಶಿರಗುರ ಗ್ರಾಮದ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ್ದು ಹೆಜ್ಜೆ ಗುರುತುಗಳನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ. ಇದೀಗ ಹುಲಿ ಪಕ್ಕದ ಕಾನನಹಳ್ಳಿ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯವಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿ ಹುಲಿಯ ಚಲನವಲನಗಳ ಬಗ್ಗೆ ಗಮನ ಹರಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಇರುವಿಕೆ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು, ಇದ್ದರೆ ಹಿಡಿದು ಬೇರೆಡೆ ಸಾಗಿಸಲು ಮುಂದಾಗಬೇಕು ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.