ಚಾಮರಾಜನಗರದಲ್ಲಿ ಮತ್ತೆರಡು ಹುಲಿಗಳ ಸಾವು! Tiger Deaths

Tiger Deaths
Published on

Tiger Deaths : ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಶಾಖೆಯ ಹೊಳೆಮುರದಟ್ಟಿ ಗಸ್ತಿನ ಕಿರಬನಕಲ್ಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ (ಆಗಸ್ಟ್​ 12) 2 ಹುಲಿ ಮರಿಗಳ ಕಳೇಬರ ಪತ್ತೆಯಾಗಿದೆ.

ಮೃತಪಟ್ಟಿರುವ ಹುಲಿ ಮರಿಗಳಲ್ಲಿ ಒಂದು ಗಂಡು, ಮತ್ತೊಂದು ಹೆಣ್ಣು. ಮೇಲ್ನೋಟಕ್ಕೆ ತಾಯಿ ಹುಲಿಯಿಂದ ಬೇರ್ಪಟ್ಟ ಈ ಹುಲಿ ಮರಿಗಳು ನಿತ್ರಾಣಗೊಂಡು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಡಿಸಿಎಫ್ ಸುರೇಂದ್ರ, ಎಸಿಎಫ್ ಮರಿಸ್ವಾಮಿ, ಆರ್‌ಎಫ್‌ಒ ನಿರಂಜನ್ ತೆರಳಿ ಪರಿಶೀಲನೆ ನಡೆಸಿದರು. ಪಶು ವೈದ್ಯಾಧಿಕಾರಿಗಳಾದ ಡಾ. ವಾಸಿಂ, ಡಾ. ಸಿದ್ದರಾಜು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಹುಲಿ ಮರಿಗಳ ಕಳೇಬರವನ್ನು ಸ್ಥಳದಲ್ಲಿಯೇ ಸುಡಲಾಯಿತು.

ಹುಲಿ ಮರಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.

ಐದು ಹುಲಿಗಳ ಸಾವು

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 2025ರ ಜೂನ್ 26ರಂದು ಒಂದು ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಸೇರಿ ಐದು ಹುಲಿಗಳು ವಿಷ ಸೇವನೆಯಿಂದ ಸಾವಿಗೀಡಾದವು. ಈ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿಯಾಯಿತು ಮತ್ತು ಜನರ ಆಕ್ರೋಶಕ್ಕೂ ಕಾರಣವಾಯಿತು. ವಿಷಪೂರಿತ ಆಕಳ ಶವವನ್ನು ಹುಲಿಗಳು ತಿಂದು ಮೃತಪಟ್ಟವು. ಈ ಘಟನೆಗೆ ಸಂಬಂಧಿಸಿದಂತೆ ಸಮೀಪದ ಗ್ರಾಮಸ್ಥರಾದ ಮಧುರಾಜು, ನಾಗರಾಜು ಮತ್ತು ಕುನ್ನಪ್ಪ ಎಂಬ ಮೂವರನ್ನು ಅರಣ್ಯ ಇಲಾಖೆ ಬಂಧಿಸಿದೆ. ಆರೋಪಿಗಳು ತಮ್ಮ ದನಗಳ ಮೇಲಿನ ಹುಲಿಯ ದಾಳಿಗೆ ಪ್ರತೀಕಾರವಾಗಿ ವಿಷಯುಕ್ತ ಆಕಳ ಕಳೇಬರವನ್ನು ಇಟ್ಟಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net