ಅತ್ತ ಹುಲಿ ಮರಣ, ಇತ್ತ ಆನೆ ಜನನ; ಹುಟ್ಟು-ಸಾವು ಎರಡಕ್ಕೂ ಒಂದೇ ದಿನ ಸಾಕ್ಷಿ ಆಯ್ತು ಜೈವಿಕ ಉದ್ಯಾನ

1333634
Published on

ಬನ್ನೇರುಘಟ್ಟ: ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನ ಇಂದು ಹುಟ್ಟು-ಸಾವು ಎರಡಕ್ಕೂ ಸಾಕ್ಷಿಯಾಗಿದೆ. ಇವತ್ತೊಂದೇ ದಿನದಲ್ಲಿ ಇಲ್ಲಿ ಒಂದು ಕಡೆ ಹುಲಿ ಸಾವಿಗೀಡಾದರೆ, ಮತ್ತೊಂದು ಕಡೆ ಆನೆ ಮರಿಗೆ ಜನ್ಮ ನೀಡಿದೆ.

ಇಲ್ಲಿನ ಉದ್ಯಾನದಲ್ಲಿ 2019ರಲ್ಲಿ ಅಮರ್​-ವಿಸ್ಮಯ ಎಂಬ ಹುಲಿಗೆ ಜನಿಸಿದ್ದ ಕಿರಣ್ ಎಂಬ ಹೆಸರಿನ ಹುಲಿ ಇಂದು ಸಾವಿಗೀಡಾಗಿದೆ. ಮೂರು ವರ್ಷದ ಈ ಹುಲಿ 4 ತಿಂಗಳಿನಿಂದ ರಕ್ತದ ಪ್ರೋಟೋಜೋವಾ ಸೋಂಕಿಗೆ ಒಳಗಾಗಿ ಬಳಲುತ್ತಿತ್ತು. ಹುಲಿಯ ಆರೈಕೆ ಬಗ್ಗೆ ಪಶುವೈದ್ಯರು ತೀವ್ರ ನಿಗಾ ವಹಿಸಿದ್ದರೂ ಅದನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.

ಇನ್ನೊಂದೆಡೆ ವನಶ್ರೀ ಎಂಬ 15 ವರ್ಷದ ಹೆಣ್ಣಾನೆ ಮರಿ ಹಾಕಿದೆ. ಈ ಹಿಂದೆ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಯನ್ನು ಹಾಕಿದ್ದ ಇದು ಇಂದು ಇನ್ನೊಂದು ಮರಿಯಾನೆಗೆ ಜನ್ಮ ನೀಡಿದೆ. ತಾಯಿ ಹಾಗೂ ಮರಿಯಾನೆ ಎರಡೂ ಆರೋಗ್ಯವಾಗಿವೆ. ಈ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಆನೆಗಳ ಸಂಖ್ಯೆ 26ಕ್ಕೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net